ಬೆಂಗಳೂರು: ಆತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಾಸಕ ಮುನಿರತ್ನ ಜಾಮೀನು ಅರ್ಜಿ ವಿಚಾರಣೆಯು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 25ಕ್ಕೆ ಮುಂದೂಡಿ ಆದೇಶಿಸಿದೆ.
ರಾಮನಗರದ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಆತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಮುನಿರತ್ನ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಇಂದು ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ವಾದ ಮಂಡಿಸಿದ ಎಸ್ಐಟಿ ವಿಶೇಷ ಅಭಿಯೋಜಕ (ಎಸ್‌ಪಿಪಿ) ಎಸ್.ಪಿ. ಪ್ರದೀಪ್, ''ದೂರುದಾರ ಮಹಿಳೆಗೆ ಜಾಮೀನು ಅರ್ಜಿ ಸಿಕ್ಕಿಲ್ಲ. ಅಲ್ಲದೆ, ನನಗೂ ಇಂದು ನೋಟಿಸ್ ಪ್ರತಿ ದೊರೆತಿದೆ. ಹೀಗಾಗಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು'' ಎಂದು ಮನವಿ ಮಾಡಿದರು. ಈ ಮನವಿ ಮಾನ್ಯ ಮಾಡಿದ ಕೋರ್ಟ್, ಸೆಪ್ಟೆಂಬರ್ 25ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.
ಪೊಲೀಸ್ ಕಸ್ಟಡಿ ಕೋರಿ ಎಸ್ಐಟಿ ಮನವಿ: ಮತ್ತೊಂದೆಡೆ, ನ್ಯಾಯಾಂಗ ಬಂಧನದಲ್ಲಿರುವ ಮುನಿರತ್ನ ಅವರನ್ನು 14 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಬೇಕೆಂದು ಎಸ್ಐಟಿಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ಸಹ ನಡೆಯಿತು. ಪ್ರಕರಣ ಸಂಬಂಧ ದೂರುದಾರ ಮಹಿಳೆಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಜೈಲಿನಲ್ಲಿರುವ ಕಾರಣ ಆರೋಪಿ ಮುನಿರತ್ನ ಅವರನ್ನು ನಾಳೆ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಬೇಕೆಂದು ಜೈಲಾಧಿಕಾರಿಗಳಿಗೆ ಸೂಚಿಸಿದ ನ್ಯಾಯಾಲಯ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
Post a comment
Log in to write reviews