ಭೂಕುಸಿತದಲ್ಲಿ ಕಣ್ಮರೆಯಾದ ಮುಂಡಕೈ ಗ್ರಾಮ: 400 ಮನೆಗಳ ಪೈಕಿ ಉಳಿದಿದ್ದು 30 ಮಾತ್ರ!
ಕೇರಳ: ಭಾರೀ ಮಳೆಯ ಹೊಡೆತಕ್ಕೆ ಸಿಲುಕಿ ದೇವರನಾಡು ಕೇರಳ ಅಕ್ಷರಶಃ ಕಂಗಾಲಾಗಿದೆ. ವಯನಾಡಿನಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 168ಕ್ಕೆ ಏರಿಕೆಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಮನೆ, ಶಾಲೆ, ವಾಹನ ಎಲ್ಲವೂ ಕೊಚ್ಚಿಕೊಂಡು ಹೋಗಿದೆ. ಸೇನಾ ಸಿಬ್ಬಂದಿ ಸೇರಿದಂತೆ ಹಲವರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಹೊರ ಬಿದ್ದಿದ್ದು, ಮುಂಡಕೈ ಗ್ರಾಮವೇ ನಾಮಾವಶೇಷವಾಗಿದೆ! ಇಲ್ಲಿದ್ದ 400 ಮನೆಗಳ ಪೈಕಿ ಉಳಿದಿರುವುದು 30 ಮಾತ್ರ! ಎಂದು ವರದಿಯಾಗಿದೆ. (Wayanad Landslide).
ಭೂಕುಸಿತದಿಂದ ಅತೀ ಹೆಚ್ಚು ತೊಂದರೆಗೊಳಗಾದ ಮುಂಡಕೈಯಲ್ಲಿನ ಪರಿಸ್ಥಿತಿ ಶೋಚನೀಯವಾಗಿ ಮುಂದುವರಿದಿದೆ. ʼʼಈ ಗ್ರಾಮದಲ್ಲಿದ್ದ ಸುಮಾರು 400 ಮನೆಗಳ ಪೈಕಿ ಬಾಕಿ ಉಳಿದಿರುವುದು 30 ಮನೆ ಮಾತ್ರʼʼ ಎಂದು ಪಂಚಾಯತ್ ಮೂಲಗಳು ತಿಳಿಸಿವೆ.
ಇಲ್ಲಿನ ರಕ್ಷಣಾ ಕಾರ್ಯಾಚರಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಬೈಲಿ ಸೇತುವೆ ನಿರ್ಮಿಸಲು ಸೇನೆ ಯೋಜನೆ ರೂಪಿಸಿದ್ದು, ಅದಕ್ಕಾಗಿ ಸಾಮಗ್ರಿಗಳನ್ನು ಹೊತ್ತ ವಿಶೇಷ ವಿಮಾನ, ಕಣ್ಣೂರು ವಿಮಾನ ನಿಲ್ದಾಣಕ್ಕೆ ತಲುಪಿದೆ. 18 ಲಾರಿಗಳ ಮೂಲಕ ಇದನ್ನು ಮುಂಡಕೈಗೆ ತಲುಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ʼʼಬೈಲಿ ಸೇತುವೆ ನಿರ್ಮಾಣದಿಂದ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗೆ ಇನ್ನಷ್ಟು ವೇಗ ಸಿಗಲಿದೆʼʼ ಎಂದು ಸಚಿವ ಕೆ.ರಾಜನ್ ತಿಳಿಸಿದ್ದಾರೆ. ಜತೆಗೆ ಸೇನೆಯ 3 ಯೂನಿಟ್ ಮತ್ತು ಡಾಗ್ ಸ್ಕ್ವಾಡ್ ಕೂಡ ಸ್ಥಳಕ್ಕೆ ಆಗಮಿಸಲಿದೆ ಎಂದು ಸಚಿವರು ಹೇಳಿದ್ದಾರೆ.
ಜೊತೆಗೆ ದುರಂತ ನಿವಾರಣೆಗಾಗಿ ಇರುವ ಸ್ಥಳೀಯ ಸಂಸ್ಥೆಗಳ ಫಂಡ್ ಉಪಯೋಗಿಸಲೂ ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಇಂದು ದುರಂತ ಪೀಡಿತ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇವರಲ್ಲದೆ ಸುಮಾರು 6 ಸಚಿವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಅಗತ್ಯವಿರುವ ಎಲ್ಲ ನೆರವು ನೀಡಿವುದಾಗಿ ರಾಜ್ಯಪಾಲರು ಘೋಷಿಸಿದ್ದಾರೆ. ಅದೇ ರೀತಿ ದೇಶದ ಎಲ್ಲ ಭಾಗಗಳಿಂದಲೂ ಸಹಾಯಹಸ್ತ ದೊರೆಯುವ ವಿಶ್ವಾಸವಿದೆ ಎಂದಿದ್ದಾರೆ. ಮುಖ್ಯಮಂತ್ರಿ ಹೇಳಿದಂತೆ 2018 ಮತ್ತು 2019ರ ದುರಂತದಿಂದ ಪಾರಾದಂತೆ ಈ ಅವಘಡದಿಂದಲೂ ಕೇರಳ ಚೇತರಿಸಿಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Post a comment
Log in to write reviews