
ಬೆಂಗಳೂರು: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ವಶಕ್ಕೆ ಪಡೆದುಕೊಂಡರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಕೇಸ್‌ನಲ್ಲಿ ಈಗಾಗಲೇ ಸಿಬಿಐ ತನಿಖೆ ನಡೆಸಿದೆ. ಇದರ ಬೆನ್ನಲ್ಲೇ ಏಕಾಏಕಿ ಇಡಿ ಅಧಿಕಾರಿಗಳು ಬುಧವಾರ ಕಾಂಗ್ರೆಸ್ ಶಾಸಕರಾದ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ನಿವಾಸಗಳ ಮೇಲೆ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು.
ಬುಧವಾರ (ಜುಲೈ 10) ಬೆಳ್ಳಂಬೆಳಗ್ಗೆ ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕರಾದ ನಾಗೇಂದ್ರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ಬಳಿಕ ಇಡಿ ಅಧಿಕಾರಿಗಳು ಬೆಂಗಳೂರಿನಲ್ಲಿ ನಾಗೇಂದ್ರ ಆಪ್ತ ಸಹಾಯಕ ಹರೀಶ್ ಎಂಬುವರನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸಿದ್ದರು. ಈ ವೇಳೆ ಹರೀಶ್ ನೀಡಿದ ಕೆಲ ಮಾಹಿತಿ ಆಧಾರದ ಮೇಲೆ ಶಾಸಕ ನಾಗೇಂದ್ರನ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಾಸಕ ನಾಗೇಂದ್ರ ವಿರುದ್ಧ ಸಚಿವರ ಪರವಾಗಿ ಒತ್ತಡ ಹಾಕಿ ಹಣದ ವಹಿವಾಟು ನಡೆಸಿದ ಆರೋಪ ಕೇಳಿ ಬಂದಿದೆ. ಹೈದರಾಬಾದ್‌ನ ಸತ್ಯನಾರಾಯಣ ವರ್ಮಾನಿಂದ ಬಂದಿದ್ದ ಹಣ ನಾಗೇಂದ್ರ ಪಿಎ ಹರೀಶ್‌ಗೆ ತಲುಪಿತ್ತು ಎನ್ನಲಾಗಿದೆ. ಅಲ್ಲದೆ ಏಪ್ರಿಲ್ ತಿಂಗಳಿನ ಎರಡನೇ ವಾರ ಪದ್ಮನಾಭನಿಂದ ಹರೀಶ್ 25 ಲಕ್ಷ ಹಣ ಪಡೆದಿದ್ದನು. ಈ ಬಗ್ಗೆ ಪಿಎ ಹರೀಶ್‌ಗೆ ಹಣ ನೀಡಿದ್ದಾಗಿ ಖುದ್ದು ಪದ್ಮನಾಭ್ ಹೇಳಿಕೆ ನೀಡಿದ್ದರು.
ನಾಗೇಂದ್ರ ಪರ ಹವಾಲಾ ಹಣ ಮತ್ತು ಚಿನ್ನದ ಬಿಸ್ಕೆಟ್ ಪಡೆದ ಆರೋಪ ಇದ್ದು, ಮಾಜಿ ಸಚಿವ ನಾಗೇಂದ್ರ ಪರ 50ರಿಂದ 60 ಕೋಟಿ ವ್ಯವಹಾರ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಲು ಹರೀಶ್‌ನನ್ನು ಇಡಿ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Poll (Public Option)

Post a comment
Log in to write reviews