ರಾಜ್ಯದ ರೈತರ ಪರ ಸಂಸದ ಯದುವೀರ್ ಧ್ವನಿ : ಕಾಳುಮೆಣಸಿಗೆ ಜಿಎಸ್ಟಿ ವಿನಾಯಿತಿ ಕೋರಿ ನಿರ್ಮಲಾ ಸೀತಾರಾಮನ್ಗೆ ಮನವಿ

ಬೆಂಗಳೂರು, ಸೆ.17:ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ರೈತರ ಪ್ರಮುಖ ಸಮಸ್ಯೆಯಾದ ಕರಿಮೆಣಸಿಗೆ ಜಿಎಸ್‌ಟಿ ವಿನಾಯಿತಿ ಕುರಿತು ಚರ್ಚಿಸಲು ಇಂದು ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದರು.
ಕರಿಮೆಣಸು ಮತ್ತು ಏಲಕ್ಕಿಯನ್ನು ಸರಕು ಮತ್ತು ಸೇವಾ ತೆರಿಗೆ(GST) ವ್ಯಾಪ್ತಿಗೆ ತರುವಂತೆ ಅಧಿಕಾರಿಗಳು ರೈತರು, ಬೆಳೆಗಾರರನ್ನು ಒತ್ತಾಯಪಡಿಸುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲದಿನಗಳ ಹಿಂದೆ ಕೊಡಗು ಪ್ಲಾಂಟರ್ಸ್ ಕ್ಲಬ್ ಕೊಡಗು ಮೈಸೂರು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Wadiyar) ಅವರನ್ನು ಭೇಟಿ ಮಾಡಿ ಇದನ್ನು ತಡೆಯುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಇಂದು(ಸೆ.17) ಯದುವೀರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ರೈತರ ಪ್ರಮುಖ ಸಮಸ್ಯೆಯಾದ ಕರಿಮೆಣಸಿಗೆ ಜಿಎಸ್‌ಟಿ ವಿನಾಯಿತಿ ಕುರಿತು ಚರ್ಚಿಸಲು ಇಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ರೈತರ ಕೃಷಿ ಉತ್ಪನ್ನ ವರ್ಗೀಕರಣ ಮತ್ತು ರಫ್ತುಗಳ ಮೇಲೆ ಆಗುವಂತಹ ಪರಿಣಾಮಗಳನ್ನು ಉಲ್ಲೇಖಿಸಿ ವಿನಾಯಿತಿ ಮುಂದುವರಿಕೆಗೆ ವಿನಂತಿಸಲಾಗಿದೆ ಎಂದಿದ್ದಾರೆ.
ಇನ್ನು ಈ ಕುರಿತು ಮಾತನಾಡಿದ್ದ ಸಿಪಿಎ ಅಧ್ಯಕ್ಷ ನಂದಾ ಬೆಳ್ಳಪ್ಪ, ‘ ಜಿಎಸ್ಟಿ ಅಧಿಕಾರಿಗಳು ಜಿಲ್ಲೆಯ ರೈತರು ಮತ್ತು ಬೆಳೆಗಾರರಿಗೆ ಕರಿಮೆಣಸು ಜಿಎಸ್ಟಿ ವ್ಯಾಪ್ತಿಯಲ್ಲಿ ಬರುತ್ತದೆ. ಆದ್ದರಿಂದ ತಮ್ಮನ್ನು ಜಿಎಸ್ಟಿ ಅಡಿಯಲ್ಲಿ ನೊಂದಾಯಿಸಿಕೊಳ್ಳುವಂತೆ ಒತ್ತಾಯಿಸಿ ನೋಟಿಸುಗಳನ್ನು ನೀಡುತ್ತಿದ್ದಾರೆ. ಹಸಿ ಕಾಳುಮೆಣಸು ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಅದನ್ನು ಒಣಗಿಸಿ ಕರಿಮೆಣಸಿಗೆ ಪರಿವರ್ತಿಸಿದರೆ ಅದಕ್ಕೆ ಜಿ.ಎಸ್.ಟಿ ಬೀಳುತ್ತದೆ. ಇದು ಯಾವ ರೀತಿಯ ನ್ಯಾಯ ಎಂದು ಪ್ರಶ್ನಿಸಿದ್ದರು. ಇದೀಗ ಸಂಸದ ಯದುವೀರ್ ಅವರು ಕರ್ನಾಟಕದ ರೈತರ ಪರ ದನಿ ಎತ್ತಿದ್ದಾರೆ.
Poll (Public Option)

Post a comment
Log in to write reviews