2024-09-19 04:35:26

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

6,000ಕ್ಕೂ ಹೆಚ್ಚು ಗ್ರಂಥ ಮೇಲ್ವಿಚಾರಕರು ಕನಿಷ್ಠ ವೇತನ ವ್ಯಾಪ್ತಿಗೆ: ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಂಥ ಪಾಲಕರ ದಿನಾಚರಣೆ ಮತ್ತು ಮೇಲ್ವಿಚಾರಕರ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ, ರಾಜ್ಯದಲ್ಲಿ 6,599 ಹೊಸ ಗ್ರಾಮ ಗ್ರಂಥಾಲಯ ಕಾರ್ಯಕ್ರಮ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪುಸ್ತಕಗಳು ಒಳ್ಳೆಯ ಸ್ನೇಹಿತನಿದ್ದಂತೆ. ಗ್ರಂಥಾಲಯಗಳಿಗೆ ಹೋಗುವುದು ಅತ್ಯಂತ ಉತ್ತಮ ಹವ್ಯಾಸ. ಗ್ರಾಮಗಳಲ್ಲಿ 6,599 ಗ್ರಾಮ‌ಮಟ್ಟದ ಗ್ರಂಥಾಲಯಗಳನ್ಮು ತೆರೆಯುವ ನಿರ್ಧಾರ ಮಾಡಿ ಘೋಷಣೆ ಮಾಡಿದ್ದೇವೆ. ನಮ್ಮ ಸರ್ಕಾರ ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದರು.

ಜ್ಞಾನ ವಿಕಾಸ ಕೇವಲ ಶಾಲಾ ಶಿಕ್ಷಣದಿಂದ ಮಾತ್ರ ಸಾಧ್ಯವಿಲ್ಲ. ಶಾಲೆಗಳ ಹೊರಗೂ ಕಲಿಕೆ ಅಗತ್ಯ. ಸಾವಿರಾರು ವರ್ಷಗಳ ಕಾಲ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ಸಮುದಾಯಗಳಿಗೆ ಅಂಬೇಡ್ಕರ್ ಅವರ ಸಂವಿಧಾನದ ಕಾರಣದಿಂದ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದೆ. ನಾವು 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನೂರಕ್ಕೆ ನೂರು ಸಾಕ್ಷರತೆ ಸಾಧ್ಯವಾಗಿಲ್ಲ. ಇದನ್ನು ಸಾಧಿಸುವ ದಿಕ್ಕಿನಲ್ಲಿ ನಾವು ಶ್ರಮಿಸಬೇಕಿದೆ ಎಂದರು.

ಪ್ರತಿಯೊಬ್ಬ ಯುವಕ, ಯುವತಿಯರು ಹಾಗೂ ಮಕ್ಕಳು ಗ್ರಂಥಾಲಯಗಳ ಸದುಪಯೋಗ ಪಡಿಸಿಕೊಂಡು ಜ್ಞಾನಾರ್ಜನೆ ಮಾಡಬೇಕು. ಇದೇ ಅಂಬೇಡ್ಕರ್ ಅವರ ಕನಸಾಗಿತ್ತು. ಜ್ಞಾನ ಪಡೆಯುವುದು ಎಂದರೆ ಮನುಷ್ಯರಾಗಿ ಬಾಳುವುದು. ಎಲ್ಲಾ ಮಕ್ಕಳೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ. ಸಾಮಾಜಿಕ ಪ್ರಭಾವದಿಂದ ಬೆಳೆಯುತ್ತಾ ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ ಎಂದು ಕುವೆಂಪು ಅವರು ಹೇಳಿದ್ದಾರೆ. ಆದ್ದರಿಂದ ಬೆಳೆಯುತ್ತಲೂ ನಾವು ವಿಶ್ವ ಮಾನವರಾಗಿ ಉಳಿಯುವಂತಹ ಪ್ರಯತ್ನ ಮಾಡಬೇಕು. ಆಗ ಮಾತ್ರ ಮಾನವನ ಹುಟ್ಟು ಸಾರ್ಥಕ ಆಗುತ್ತದೆ ಎಂದು ತಿಳಿಸಿದರು.

ಗ್ರಂಥಾಲಯದ ವಿಶೇಷತೆ ಏನಿದೆ?: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಈಗಾಗಲೇ 5,895 ಗ್ರಂಥಾಲಯಗಳನ್ನು ಸಜ್ಜುಗೊಳಿಸಿದ್ದು, ಇದರೊಂದಿಗೆ ಈ ವರ್ಷ 263.96 ಕೋಟಿ ರೂ. ಅನುದಾನದಲ್ಲಿ ರಾಜ್ಯದಲ್ಲಿ 6,599 ಹೊಸ ಗ್ರಾಮ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ. ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಸಂಸ್ಥೆಯಿಂದ ರಾಜ್ಯದಲ್ಲಿ ಹೊಸದಾಗಿ ಆರಂಭಿಸಲಾಗುತ್ತಿರುವ 6,599 ಗ್ರಾಮೀಣ ಗ್ರಂಥಾಲಯಗಳಿಗೆ ತಲಾ 2 ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗಿದೆ. ಇದಕ್ಕಾಗಿ 131.98 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರತಿ ಗ್ರಂಥಾಲಯಕ್ಕೆ ಪೀಠೋಪಕರಣಗಳು ಹಾಗೂ ಡಿಜಿಟಲ್ ಪರಿಕರಗಳನ್ನು ನಿಯಮಾನುಸಾರ ಖರೀದಿಸಿ ಪೂರೈಸಲಾಗುವುದು. 6,599 ಹೊಸ ಗ್ರಾಮ ಗ್ರಂಥಾಲಯಗಳಿಗೆ ಮಕ್ಕಳ ಪುಸ್ತಕಗಳನ್ನು ಅಜೀಂ ಪ್ರೇಮ್ ಜಿ ಫೌಂಡೇಶನ್ ಕೊಡುಗೆಯಾಗಿ ನೀಡುತ್ತಿದೆ.

ಡಿಜಿಟಲ್ ಗ್ರಂಥಾಲಯ: 5,895 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಪೈಕಿ 5,691 ಗ್ರಂಥಾಲಯಗಳಿಗೆ ತಲಾ 2 ಗಣಕಯಂತ್ರಗಳು ಹಾಗೂ ಪೂರಕ ಸಾಧನಗಳನ್ನು ಒದಗಿಸಿ, ಅಂತರ್ಜಾಲ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಡಿಜಿಟಲೀಕರಣಗೊಳಿಸಲಾಗಿದೆ. ವಿಶೇಷ ಚೇತನರಿಗೆ ಅನುಕೂಲ ಮಾಡಿಕೊಡಲು ರಾಜ್ಯಾದ್ಯಂತ 814 ಬೀಕನ್ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗಿದೆ.

Post a comment

No Reviews