ಟಾಟಾ ಕಂಪನಿಯಲ್ಲಿ ಭಾರೀ ಅಗ್ನಿ ದುರಂತ; ಪ್ರಾಣಾಪಾಯದಿಂದ ಓಡಿದ ಕಾರ್ಮಿಕರು, ಕೋಟ್ಯಾಂತರ ರೂ. ಆಸ್ತಿ ನಷ್ಟ
ಬೆಂಗಳೂರು: ಟಾಟಾ ಕಂಪನಿಯಲ್ಲಿ (TATA Company) ಭಾರೀ ಅಗ್ನಿ ಅವಘಡ ಸಂಭವಿಸಿರುವ ಘಟನೆ ರಾಜ್ಯ ಗಡಿಭಾಗ ತಮಿಳುನಾಡಿನ (Tamil Nadu) ಹೊಸೂರು ಸಮೀಪದ ಕೂತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಟಾಟಾ ಕಂಪನಿಯ ಎಲೆಕ್ಟ್ರಾನಿಕ್ ವಸ್ತುಗಳು ತಯಾರಾಗುತ್ತಿದ್ದ ಘಟಕದಲ್ಲಿ ಬೆಂಕಿ (Fire Accident) ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಇಡೀ ಘಟಕ್ಕೆ ಅವರಿಸಿದೆ. ಕೂಡಲೇ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು (Workers) ಘಟಕದಿಂದ ಹೊರ ಓಡಿ ಬಂದು ಜೀವ ಉಳಿಸಿಕೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಆಹುತಿಯಾಗಿದ್ದು, ರಾಯಕೋಟೆ ಮತ್ತು ಡೆಂಕಣಿಕೋಟೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಿಯಂತ್ರಿಸುವ ಕಾರ್ಯ ಮಾಡಿದ್ದಾರೆ. ಕಾರು ಮತ್ತು ಫೋನ್‌ಗಳಿಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ವಸ್ತುಗಳ ಬಿಡಿಭಾಗಗಳ ತಯಾರಿಕಾ ಘಟಕ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಇಂದು ಬೆಳಗ್ಗೆ 5 ಗಂಟೆ ವೇಳೆಗೆ ಕೆಮಿಕಲ್ ಘಟಕದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಭಾರೀ ಪ್ರಮಾಣದಲ್ಲಿ ಹಬ್ಬಿದೆ.
ಸ್ಥಳದಲ್ಲಿ ಐದಕ್ಕೂ ಹೆಚ್ಚು ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು, ರಾಯಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಗ್ನಿ ಅವಘಡ ಸಂಭವಿಸಿದ ಕಾರ್ಖಾನೆಯಲ್ಲಿ ಸುಮಾರು 20 ಸಾವಿರ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರಂತೆ, ಒಂದು ಶಿಫ್ಟ್ಗೆ ನಾಲ್ಕೂವರೆ ಸಾವಿರ ಮಂದಿ ಕಾರ್ಮಿಕರ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಇನ್ನು, ಘಟನೆಯಲ್ಲಿ ಗಾಯಗೊಂಡ ಮೂವರು ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೊಗೆಯಿಂದಾಗಿ ಉಸಿರಾಟದ ತೊಂದರೆಯಿಂದ ಮೂವರು ಕಾರ್ಮಿಕರು ಬಳಲುತ್ತಿದ್ದರು ಎನ್ನಲಾಗಿದೆ. ಅಗ್ನಿ ಅವಘಡ ಹಿನ್ನೆಲೆ ಕೂತನಹಳ್ಳಿ ಟಾಟಾ ಘಟಕಕ್ಕೆ ರಜೆ ಘೋಷಣೆ ಮಾಡಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಮೂವರು ಕಾರ್ಮಿಕರು ಚೇತರಿಕೆ ಕಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Post a comment
Log in to write reviews