ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರೆಡು ಕಂಚಿನ ಪದಕಗಳನ್ನು ಗೆದ್ದಿರುವ ಮನು ಭಾಕರ್ ಅವರ ತಂಡ ಪ್ರಮುಖ ಬ್ರ್ಯಾಂಡ್ ಕಂಪನಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೆ ಕಾರಣವೇನೆಂದರೆ ಒಲಿಂಪಿಕ್ಸ್ ಪದಕ ಗೆದ್ದ ಬೆನ್ನಲ್ಲೇ ಕೆಲ ಕಂಪನಿಗಳು ಅವರ ಫೋಟೋ ಮತ್ತು ವಿಡಿಯೋಗಳನ್ನು ಅಭಿನಂದನಾ ಜಾಹೀರಾತುಗಳಲ್ಲಿ ಬಳಸಿ ಪ್ರಚಾರ ಪಡೆದುಕೊಳ್ಳುತ್ತಿದೆ. ಇಂತಹ ಕಂಪೆನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಐಒಎಸ್ ಸ್ಪೋರ್ಟ್ಸ್ ಕಂಪನಿ ನಿರ್ಧರಿಸಿದೆ
ಐಒಎಸ್ ಸ್ಪೋರ್ಟ್ಸ್ & ಇಂಟರ್ಟೈನ್ಮೆಂಟ್ ಸಂಸ್ಥೆಯು ಮನು ಭಾಕರ್ ಅವರ ಕಾರ್ಯ ವ್ಯವಸ್ಥೆಗಳನ್ನು ನಿರ್ವಹಿಸುತ್ತಿದ್ದು, ಇದೀಗ ಕ್ರೀಡಾಪಟುವಿನ ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸಿ ಫೋಟೋಗಳು ಅಥವಾ ವೀಡಿಯೊಗಳನ್ನು ಬಳಸಿದ ಬ್ರ್ಯಾಂಡ್‌ಗಳಿಗೆ ಕಾನೂನು ಸೂಚನೆಗಳನ್ನು ಕಳುಹಿಸಲು ಈ ಕಂಪನಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಒಲಿಂಪಿಕ್ಸ್ಗೂ ಮುನ್ನ ಮನು ಭಾಕರ್ ಅವರಿಗೆ ಪ್ರಾಯೋಕತ್ವ ನೀಡಿದ್ದು ಕ್ರೀಡಾ ಗೇರ್ ಮತ್ತು ಫಿಟ್‌ನೆಸ್ ಫ್ಯಾಶನ್ ಕಂಪನಿಯಾದ ಪರ್ಫಾರ್ಮ್ಯಾಕ್ಸ್ ಆಕ್ಟಿವ್‌ವೇರ್ ಮಾತ್ರ. ಆದರೆ ಈಗ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುತ್ತಿದ್ದಂತೆ ಬಜಾಜ್ ಫುಡ್ಸ್, ಕಾಪಿಫಿಟ್, ಎಲ್ಐಸಿ, FIITJEE, ಬಿಎಸ್ಸಿ ಇಂಟೀರಿಯರ್ಸ್, ಓಕ್‌ವುಡ್ ಇಂಟರ್‌ನ್ಯಾಶನಲ್ ಸ್ಕೂಲ್, ಮತ್ತು Kineto ನಂತಹ ಬ್ರ್ಯಾಂಡ್‌ಗಳು ಫೋಟೋ ಮತ್ತು ವಿಡಿಯೋಗಳೊಂದಿಗೆ ಜಾಹೀರಾತುಗಳನ್ನು ಪ್ರಕಟಿಸಿದೆ. ಆದರೆ ಈ ಕಂಪನಿಗಳು ಮನು ಭಾಕರ್ ಅವರಿಗೆ ಈ ಹಿಂದೆ ಯಾವುದೇ ನೆರವು ನೀಡಿಲ್ಲ. ಅಲ್ಲದೆ ಯಾವುದೇ ಪ್ರಾಯೋಜಕತ್ವವನ್ನು ಘೋಷಿಸಿಲ್ಲ, ಇದಾಗ್ಯೂ ಇದೀಗ ಒಲಿಂಪಿಕ್ಸ್ ಪದಕವನ್ನು ಮುಂದಿಟ್ಟುಕೊಂಡು ಮನು ಭಾಕರ್ ಹೆಸರಿನಲ್ಲಿ ಉಚಿತ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಇದು ಕಾನೂನುಬಾಹಿರವಾಗಿದ್ದು, ಹೀಗಾಗಿ ಮನು ಭಾಕರ್ ಅವರ ತಂಡ ಪ್ರಮುಖ ಬ್ರ್ಯಾಂಡ್ಗಳ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
Post a comment
Log in to write reviews