
ಉತ್ತರ ಕನ್ನಡ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ (Shiruru Hill Collapse Operation) ಗಂಗಾವಳಿ ನದಿ ಪಾಲಾಗಿರುವ ಲಾರಿಯ ಇಂಜಿನ್, ಸ್ಕೂಟಿ ಮತ್ತು ಮೂಳೆಯೊಂದು ಪತ್ತೆಯಾಗಿದ್ದು, ಅದನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ.
ಗುಡ್ಡ ಕುಸಿತದ ಅವಶೇಷಗಳ ಪತ್ತೆ ಕಾರ್ಯ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ (22-09-2024) ನೀರಿನಾಳದಲ್ಲಿನ ಲಾರಿಯ ಇಂಜಿನ್, ಸ್ಕೂಟಿ ಮತ್ತು ಮೂಳೆಯೊಂದು ಪತ್ತೆಯಾಗಿದೆ ಎನ್ನಲಾಗಿದೆ. ಮೂರನೇ ದಿನದ ಡ್ರೆಜ್ಜರ್ ಕಾರ್ಯಾಚರಣೆಯಲ್ಲಿ ಮೂಳೆ ದೊರೆತಿದೆ. ಇದು ನಾಪತ್ತೆಯಾದ ಮೂವರಲ್ಲಿ ಯಾರದ್ದೆಂದು ತಿಳಿಯಲು ಡಿಎನ್ಎ ಟೆಸ್ಟ್ಗೆ ಕಳುಹಿಸಲಾಗಿದೆ.
ಕಾರ್ಯಾಚರಣೆ ವೇಳೆ ಪತ್ತೆಯಾದ ಲಾರಿಯ ಇಂಜಿನ್ ಬೆಂಜ್ ಲಾರಿಯದ್ದೋ ಅಥವಾ ಕೊಚ್ಚಿ ಹೋದ ಟ್ಯಾಂಕರ್‌ನದ್ದೋ ಎಂಬುದು ಖಚಿತವಾಗಿಲ್ಲ. ಶನಿವಾರದ ಕಾರ್ಯಾಚರಣೆಯಲ್ಲಿ ಟ್ಯಾಂಕರ್‌ನ ಕ್ಯಾಬಿನ್‌ನ ಭಾಗ ಹಾಗೂ ಟ್ಯಾಂಕರ್‌ನ ಎದುರಿನ ಎರಡು ಟಯರ್‌ಗಳು ಕಂಡುಬಂದಿದ್ದವು.
ಗೋವಾದಿಂದ ತರಿಸಲಾದ ಬಾರ್ಜ್ ನಿಧಾನವಾಗಿ ಕಾರ್ಯಾಚರಿಸುತ್ತಿದೆ. ಇದರಿಂದ ದಿನಕ್ಕೆ ಒಂದೆರಡು ಬಾರ್ಜ್ ಹೂಳು ತೆಗೆದು ಹಾಕಲು ಮಾತ್ರ ಸಾಧ್ಯವಾಗುತ್ತಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತು ತಂಡ ಭಾನುವಾರ ಬೆಂಜ್ ಲಾರಿಯೊಳಗಿದ್ದ ಅಕೇಶಿಯಾ ಮರದ ತುಂಡುಗಳನ್ನು ನೀರಿನಾಳದಿಂದ ದಡಕ್ಕೆ ತಲುಪಿಸಿದ್ದಾರೆ. ಅಲ್ಲದೇ, ಘಟನೆ ನಡೆದ ಸ್ಥಳದಿಂದ ಅಂದಾಜು 100 ಮೀಟರ್ ದೂರದ ನೀರಿನಾಳದಲ್ಲಿದ್ದ ಸ್ಕೂಟಿಯನ್ನು ಪತ್ತೆ ಮಾಡಿ ಮೇಲಕ್ಕೆತ್ತಲಾಗಿದೆ.
ಕಾರ್ಯಾಚರಣೆ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, "ಗಂಗಾವಳಿ ನದಿಯಲ್ಲಿ ಮೃತದೇಹ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರಯತ್ನ ಮಾಡಲಾಗುತ್ತಿದೆ. ಈಗ 10 ದಿನಗಳ ಕಾಲ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ. ಕೆಲವು ವಸ್ತುಗಳು ಸಿಗುತ್ತಿವೆ. ಇದಕ್ಕಿಂತ ಹೆಚ್ಚಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ. ಲಾರಿ, ನಾಪತ್ತೆಯಾದವರ ಕುರುಹು ಸಿಗಬಹುದು ಎಂಬ ನಿರೀಕ್ಷೆ ಇದೆ. ಇಲ್ಲದಿದ್ದರೆ ಕಾರ್ಯಾಚರಣೆಯನ್ನು ಬಂದ್ ಮಾಡುವ ಯೋಚನೆ ಇದೆ" ಎಂದು ತಿಳಿಸಿದರು.
Poll (Public Option)

Post a comment
Log in to write reviews