ಕನ್ನಡ ಪ್ರತಿಭೆಗೆ ಕ್ಯಾರೆ ಅನ್ನದೆ ಹಿಂದಿ, ತಮಿಳು ಯುವ ದಸರಾ 2024 ಕ್ಕೆ ಮಣೆ..!
ಬೆಂಗಳೂರು: ಇಡೀ ರಾಜ್ಯವೇ ಕಾಯುತ್ತಿರುವ ಯುವ ದಸರಾಗೆ ಚಾಲನೆ ಸಿಕ್ಕಿದೆ. ಶ್ರೀಮುರಳಿ, ರುಕ್ಷ್ಮಿಣಿ ವಸಂತ್ ಈ ಸಮಾರಂಭದಲ್ಲಿ ಭಾಗಿಯಾಗಿ ಮೆರುಗನ್ನು ಹೆಚ್ಚಿಸಿದ್ದರು. ಆದರೆ, ಈ ಬಾರಿ ಯುವ ದಸರಾ ಆರಂಭದಲ್ಲಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಇದೇ ಮೊದಲ ಬಾರಿಗೆ ಯುವ ದಸರಾವನ್ನು ಸ್ಥಳಾಂತರ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನೊಂದು ಕಡೆ ಯುವ ದಸರಾದ ಸಂಗೀತ ಕಾರ್ಯಕ್ರಮಕ್ಕೆ ಬಾಲಿವುಡ್ ಹಾಗೂ ತಮಿಳು ಗಾಯಕರು ಹಾಗೂ ಸಂಗೀತಕಾರರಿಗೆ ಮಣೆ ಹಾಕಿದ್ದಕ್ಕೂ ಅಸಮಧಾನ ವ್ಯಕ್ತವಾಗುತ್ತಿದೆ. ಕರ್ನಾಟಕದ ಸರ್ಕಾರದ ಈ ಕ್ರಮಕ್ಕೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ನಾಡ ಹಬ್ಬ ಮೈಸೂರು ದಸರಾ ಯುವಕರನ್ನು ಆಕರ್ಷಿಸುತ್ತದೆ. ಹಾಗಂತ ಇದು ಕೇವಲ ಮೈಸೂರಿನ ಯುವಕರನ್ನ ಅಷ್ಟೇ ಅಲ್ಲ. ಬದಲಾಗಿ ರಾಜ್ಯದ ಮೂಲೆ ಮೂಲೆಯಿಂದ ದಸರಾ ಹಬ್ಬವನ್ನು ನೋಡುವುದಕ್ಕೆ ಯುವಕರು ಆಗಮಿಸುತ್ತಾರೆ. ಕಳೆದ ವರ್ಷದವರೆಗೂ ಮೈಸೂರು ದಸರಾವನ್ನು ಓಪನ್ ಏರ್ ಥಿಯೇಟರ್ ಮಾನಸ ಗಂಗೋತ್ರಿಯಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿಗೆ ಊರಿಂದ ಆಚೆ ಆಯೋಜನೆ ಮಾಡಲಾಗುತ್ತಿದೆ ಎಂದು ಜನರು ಬೇಸರ ಹೊರ ಹಾಕುತ್ತಿದ್ದಾರೆ. 2024ನೇ ಸಾಲಿನ ಯುವ ದಸರಾವನ್ನು ನೋಡಲು ಸಂಗೀತ ಪ್ರಿಯರು ಮೈಸೂರಿನ ಹೊರವಲಯಕ್ಕೆ ಪ್ರಯಾಣ ಮಾಡಬೇಕಿದೆ. ಮೈಸೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ 9 ಕಿಮೀ ದೂರದಲ್ಲಿರುವ ಉತ್ತನಹಳ್ಳಿಯಲ್ಲಿ ಸುಮಾರು 100 ಎಕರೆ ಜಾಗದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಅಕ್ಟೋಬರ್ 6 ರಿಂದ ಆರಂಭ ಆಗುತ್ತಿರುವ ಯುವ ದಸರಾ ನೋಡುವುದಕ್ಕೆ ಜನರು ಪ್ರತಿದಿನ ಉತ್ತನಹಳ್ಳಿಗೆ ಬರಬೇಕಾಗುತ್ತೆ. ಇದು ಮೈಸೂರಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ವೇಳೆ ಕನ್ನಡ ಚಿತ್ರರಂಗ ಕೂಡ ಅಸಮಧಾನಗೊಂಡಿದೆ. ಈ ಬಾರಿಯ ಯುವ ದಸರಾದ ಸಂಗೀತ ಸಂಜೆಯಲ್ಲಿ ಕನ್ನಡ ಪ್ರತಿಭೆಗಳಿಗೆ ಮಣೆ ಹಾಕಿಲ್ಲ. ಅಕ್ಟೋಬರ್ 6 ರಿಂದ ಅಕ್ಟೋಬರ್ 10ರವರೆಗೆ ನಡೆಯಲಿರುವ ಯುವ ದಸರಾದಲ್ಲಿ ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್, ರ್ಯಾಪರ್ ಬಾದ್ಷಾ ಸಂಗೀತ ಕಾರ್ಯಕ್ರಮಗಳನ್ನು ನೀಡಲಾಗಿದ್ದಾರೆ. ಇವರೊಂದಿಗೆ ತಮಿಳಿನ ಸಂಗೀತ ದಿಗ್ಗಜರಾದ ಇಳಯರಾಜ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಕೂಡ ಕಾರ್ಯಕ್ರಮ ನೀಡುತ್ತಿದ್ದಾರೆ. ಸರ್ಕಾರವೇ ರಿಲೀಸ್ ಮಾಡಿರುವ ಪೋಸ್ಟರ್ನಲ್ಲಿ ಕನ್ನಡದ ಏಕೈಕ ಪ್ರತಿಭೆ 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರು ಬಿಟ್ಟರೆ ಬೇರೆ ಯಾವ ಗಾಯಕರ ಹೆಸರು ಕೂಡ ಇಲ್ಲ. ಹೀಗಾಗಿ ಈ ಬಾರಿಯ ಯುವ ದಸರಾದಲ್ಲಿ ಬಾಲಿವುಡ್ ಹಾಗೂ ತಮಿಳಿನ ಪ್ರತಿಭೆಗಳಿಗೆ ಮಣೆ ಹಾಕಿದ್ದಕ್ಕೆ ಕರ್ನಾಟಕ ಸರ್ಕಾರ ಹಾಗೂ ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸರ್ಕಾರದ ಈ ನಿರ್ಧಾರಕ್ಕೆ ಗಣ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಯುವ ದಸರಾ ನೋಡುವುದಕ್ಕೆ ಮೈಸೂರಿಗೆ ಪ್ರತಿ ದಿನ ಒಂದು ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆಯಿದೆ. ಈ ಕಾರಣಕ್ಕೆ ನಗರದಲ್ಲಿ ಟ್ರಾಫಿಕ್ ಹಾಗೂ ಇನ್ನಿತರ ಸಮಸ್ಯೆ ಆಗದಂತೆ ಉತ್ತನಹಳ್ಳಿಗೆ ಸ್ಥಳಾಂತರ ಮಾಡಿರುವುದಾಗಿ ದಸರಾದ ವಿಶೇಷ ಅಧಿಕಾರಿಗಳಾಗಿ ನಿಯೋಜನೆಗೊಂಡಿರುವ ಉಪ ಆಯುಕ್ತರಾದ ಜಿ. ಲಕ್ಷ್ಮಿಕಾಂತ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Post a comment
Log in to write reviews