
ಉತ್ತರಕನ್ನಡ: ಕಾಳಿ ನದಿಯ ಹಳೆಯ ಸೇತುವೆ ಕುಸಿದು ಬಿದ್ದ ಪರಿಣಾಮ ಲಾರಿಯೊಂದು ನದಿಗೆ ಉರುಳಿದ ಘಟನೆ ಮಂಗಳವಾರ ತಡರಾತ್ರಿ ಕಾರವಾರದಲ್ಲಿ ಸಂಭವಿಸಿದೆ.
ಕಾರವಾರ - ಗೋವಾ ಸಂಪರ್ಕಿಸುವ ನಗರದ ಕೋಡಿಭಾಗ್ ಬಳಿ ಇರುವ ಈ ಸೇತುವೆ ಬುಧವಾರ (ಆಗಸ್ಟ್ 07) ತಡರಾತ್ರಿ ಸುಮಾರು 12.50ರ ವೇಳೆ ಕುಸಿಸಿದೆ ಎನ್ನಲಾಗಿದೆ. ಫಿಲ್ಲರ್ ಕಂಬಗಳ ನಡುವೆ ಸೇತುವೆ ಮೂರ್ನಾಲ್ಕು ಕಡೆ ತುಂಡಾಗಿ ನದಿಗೆ ಬಿದ್ದಿದೆ. ಇದೇ ವೇಳೆ ಗೋವಾದಿಂದ ಕಾರವಾರ ಕಡೆಗೆ ಆಗಮಿಸುತ್ತಿದ್ದ ಟ್ರಕ್ ನದಿಗೆ ಉರುಳಿದೆ. ಕೂಡಲೇ ಮೀನುಗಾರರು ಹಾಗೂ ಸ್ಥಳೀಯ ಪೊಲೀಸರ ಸಹಾಯದಿಂದ ಲಾರಿ ಚಾಲಕನನ್ನು ರಕ್ಷಿಸಲಾಗಿದೆ. ಚಾಲಕ ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ಎಂದು ತಿಳಿದುಬಂದಿದೆ. ರಕ್ಷಣೆ ಮಾಡಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಸಂಭವಿಸುವ ವೇಳೆ ಬೈಕ್ ಹಾಗೂ ಕಾರು ಕೂಡ ಇದೇ ಸೇತುವೆ ಮೇಲೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದ್ದು, ಅವರು ಸ್ವಲ್ಪದರಲ್ಲೇ ಮುಂದೆ ಸಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಟ್ರಕ್ ನೀರಿನಲ್ಲಿ ಬಿದ್ದಿದ್ದು, ನದಿಯಲ್ಲಿ ಮತ್ಯಾವುದಾದರೂ ವಾಹನಗಳಿವೆಯಾ ಎಂಬ ಬಗ್ಗೆ ಸ್ಥಳೀಯ ಮೀನುಗಾರರ ಜೊತೆ ಪೊಲೀಸರು ದೋಣಿಗಳ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ ಎಂದು ಸ್ಥಳೀಯರಾದ ನಾಗೇಶ್ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ 66ರ ಈ ಸೇತುವೆ ಸುಮಾರು 60 ವರ್ಷ ಹಳೆಯದಾಗಿತ್ತು. ಕಳೆದ ಎರಡು ವರ್ಷದ ಹಿಂದೆ ರಿಪೇರಿ ಕೂಡ ಮಾಡಲಾಗಿತ್ತು. ಆದರೆ, ಇದೀಗ ಕುಸಿದು ಬಿದ್ದಿದ್ದು, ಸದ್ಯ ಹೊಸ ಸೇತುವೆ ಮೇಲೆಯೂ ಸಂಚಾರ ನಿರ್ಬಂಧಿಸಿರುವ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
Poll (Public Option)

Post a comment
Log in to write reviews