
ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜೊತೆಗೂಡಿ ಹೋರಾಟ ನಡೆಸುವ ಸಂಬಂಧ ಕೇಂದ್ರ ಸಚಿವ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಇಂದು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಮುಡಾ ಪ್ರಕರಣ ಸಂಬಂಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುವ ಕುರಿತು ಪ್ರತಿಕ್ರಿಯಿಸಿದ ಅವರು, "ನಮ್ಮನ್ನು ಸರಿಯಾದ ರೀತಿಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದರೆ, ನಾವ್ಯಾಕೆ ಬೆಂಬಲ ಕೊಡಬೇಕು" ಎಂದು ಅವರು ಪ್ರಶ್ನಿಸಿದರು. ಈ ಮೂಲಕ ಪಾದಯಾತ್ರೆಗೆ ನಮ್ಮ ಬೆಂಬಲವಿಲ್ಲ ಎಂಬ ನಿಲುವು ಹೊರಹಾಕಿದ್ದಾರೆ.
ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ: ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮೈಸೂರಿನಿಂದ ಬೆಂಗಳೂರಿನವರೆಗೆ ನಮ್ಮ ಶಕ್ತಿ ಇದೆ. ಇಷ್ಟೆಲ್ಲಾ ಇದ್ದು, ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದರೆ, ನಾವ್ಯಾಕೆ ಬೆಂಬಲ ಕೊಡಬೇಕು?. ರಾಜಕಾರಣ ಬೇರೆ, ಚುನಾವಣೆಗಳು ಬಂದಾಗ ಒಟ್ಟಿಗಿರುವುದು ಬೇರೆ. ಆದರೆ, ಇವತ್ತಿನ ಈ ರೀತಿಯ ಕಾರ್ಯಕ್ರಮದಿಂದ ಯಾವ ಸಾಧನೆ ಮಾಡಲು ಸಾಧ್ಯ?. ಇದು ನನ್ನ ಮನಸ್ಸಿಗೂ ನೋವಾಗಿದೆ'' ಎಂದರು.
ಪ್ರೀತಂ ಗೌಡ ವಿರುದ್ಧ ವಾಗ್ದಾಳಿ: ಮುಂದುವರೆದು ಮಾತನಾಡುತ್ತಾ, ''ಅವರು ಪಾದಯಾತ್ರೆ ಮುಖ್ಯಸ್ಥರನ್ನಾಗಿ ಯಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ?, ಆ ಪ್ರೀತಂ ಗೌಡ ಯಾರು?, ದೇವೇಗೌಡರ ಕುಟುಂಬವನ್ನು ಸಾರ್ವನಾಶ ಮಾಡಲು ಹೋಗಿದ್ದವನು. ಆತನನ್ನು ಸಭೆಗೆ ಕರೆದು ಕೂರಿಸಿಕೊಂಡು, ನನ್ನನ್ನೂ ಆ ಸಭೆಗೆ ಕರೆಯುತ್ತಾರೆ. ನನಗೂ ಇದನ್ನೆಲ್ಲ ಸಹಿಸಿಕೊಳ್ಳಲು ಇತಿಮಿತಿ ಇದೆ'' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಪೆನ್ಡ್ರೈವ್ ವಿಷಯ ಪ್ರಸ್ತಾಪಿಸಿ, ''ಬೀದಿಗಳಲ್ಲಿ ಪೆನ್ಡ್ರೈವ್ ಹಂಚಲು ಯಾರು ಕಾರಣ?. ಇವರನ್ನು ಸಭೆಯಲ್ಲಿ ಕೂರಿಸಿಕೊಂಡು ನನ್ನನ್ನು ಸಭೆಗೆ ಕರೆಯುತ್ತಾರಾ?, ಅವನ ಪಕ್ಕದಲ್ಲಿ ಕೂರಿಸಿಕೊಂಡು ಮೀಟಿಂಗ್ ಮಾಡುಲು ಕರೆಯುತ್ತೀರಾ?, ನಮ್ಮ ಕುಟುಂಬಕ್ಕೆ ವಿಷ ಹಾಕುವವರನ್ನು ಜೊತೆಯಲ್ಲಿ ಕೂರಿಸಿಕೊಂಡು ನಮ್ಮ ಬೆಂಬಲ ಕೇಳುತ್ತಾರಾ?, ಹಾಸನದಲ್ಲಿ ಏನಾಗಿದೆ, ಯಾರು ಕಾರಣವೆಂದು ಗೊತ್ತಿಲ್ವಾ? ಎಂದು ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು.
ಪಾದಯಾತ್ರೆಗೆ ನೈತಿಕ ಬೆಂಬಲವೂ ಕೊಡಲ್ಲ: "ಪಾದಯಾತ್ರೆ ಮಾಡಬೇಕೆಂದು ಬಿಜೆಪಿ ನಾಯಕರು ಈ ಮುಂಚೆಯೇ ನಿರ್ಧಾರ ಮಾಡಿದ್ದರು. ನಮಗೆ ಮಾಹಿತಿಗಾಗಿ ಹೇಳಿದ್ದಾರೆ ಅಷ್ಟೇ. ಬಿಜೆಪಿ ನಿಲುವಿನಲ್ಲಿಯೇ ತೀರ್ಮಾನ ತೆಗೆದುಕೊಂಡು ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಇದು ಸೂಕ್ತ ಸಂದರ್ಭ ಅಲ್ಲ ಅಂತಾ ನಾವು ಹಿಂದೆ ಸರಿದಿದ್ದೇವೆ. ಜನರ ಟೀಕೆ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ. ಅಲ್ಲಿನ ಜನರ ಸಮಸ್ಯೆ ಏನು, ಅದು ಮುಖ್ಯ. ಪಾದಯಾತ್ರೆಯಿಂದ ಲಾಭ ಏನು?, ಕಾನೂನು ಹೋರಾಟವೂ ಮುಖ್ಯ. ರಾಜಕೀಯವೇ ನಮಗೆ ಮುಖ್ಯವಲ್ಲ. ನಾವು ನೈತಿಕ ಬೆಂಬಲವೂ ಕೊಡಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು" ಎಂದು ಪ್ರಶ್ನಿಸಿದರು.
ಅಷ್ಟೇ ಅಲ್ಲ, ''ಮಳೆಯಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿವೆ. ಉತ್ತರ ಕರ್ನಾಟಕದಲ್ಲಿ ನೂರಾರು ಹಳ್ಳಿಗಳು ಜಲಾವೃತವಾಗಿವೆ. ಇಂತಹ ಸಂದರ್ಭದಲ್ಲಿ ನಾವು 10 ದಿನ ಪಾದಯಾತ್ರೆಗೆ ಹೋದರೆ, ಯಾರು ಮೆಚ್ಚುತ್ತಾರೋ ನನಗೆ ಗೊತ್ತಿಲ್ಲ'' ಎಂದು ಅತೃಪ್ತಿ ವ್ಯಕ್ತಪಡಿಸಿದರು.
Poll (Public Option)

Post a comment
Log in to write reviews