ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ: ನಟ ದರ್ಶನ್ ವಿರುದ್ಧ ಮತ್ತೆ 3 ಪ್ರತ್ಯೇಕ ಎಫ್‌ಐಆರ್ ದಾಖಲು
ಬೆಂಗಳೂರು: ಜೈಲಿನಲ್ಲಿ ನಟ ದರ್ಶನ್‌ಗೆ (Actor Darshan) ರಾಜಾತಿಥ್ಯ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ ಅವರಿಂದ ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳ ರಚನೆ ಮಾಡಲಾಗಿದೆ.
ಜೈಲಿನ ಲಾನ್‌ನಲ್ಲಿ ಕುಳಿತು ಕಾಫಿ, ಸಿಗರೇಟ್ ಸೇವನೆ ಬಗ್ಗೆ ಬೇಗೂರು ಇನ್ಸ್‌ಪೆಕ್ಟರ್ ಕೃಷ್ಣ ಕುಮಾರ್ ತನಿಖೆ ನಡೆಸಲಿದ್ದಾರೆ. ರೌಡಿಶೀಟರ್‌ಗಳ ಜೊತೆ ದರ್ಶನ್ ಬೇರೆತಿದ್ದು ಹೇಗೆ? ಲಾನ್‌ನಲ್ಲಿ ಎಲ್ಲರು ಒಟ್ಟಿಗೆ ಕೂರಲು ಚೇರ್ ವ್ಯವಸ್ಥೆ ಮಾಡಿದವರು ಯಾರು? ಕಾಫಿ ಮಗ್ ಹೇಗೆ ಬಂತು, ಹಾಗೂ ಜೈಲಿನಲ್ಲಿ ಸಿಗರೇಟ್, ಮದ್ಯ, ಮಾದಕವಸ್ತು ನಿಷೇಧ ಇದ್ದರೂ ಸಿಗರೇಟ್ ಹೇಗೆ ಸಿಕ್ಕಿತು ಎಂದು ತನಿಖೆ ನಡೆಸಲಿದ್ದಾರೆ.
ಇನ್ನೂ ಎರಡನೇ ಪ್ರಕರಣದ ತನಿಖೆ ಹುಳಿಮಾವು ಇನ್ಸ್‌ಪೆಕ್ಟರ್ ಹೆಗಲಿಗೆ ಬಿದ್ದಿದೆ. ಮೊಬೈಲ್ ಫೋನ್‌ನಲ್ಲಿ ಫೋಟೊ ತೆಗದಿದ್ದು ಹಾಗೂ ವಿಡಿಯೋ ಕರೆ ಬಗ್ಗೆ ಹುಳಿಮಾವು ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ಎರಡನೇ ಪ್ರಕರಣದ ತನಿಖೆ ನಡೆಯಲಿದೆ. ಇನ್ನೂ ಜೈಲಿನಲ್ಲಿ ಫೋಟೊ ತೆಗೆದು ಹೊರಗಡೆ ರವಾನೆ ಮಾಡಿದ್ದು ಯಾರು? ಜೈಲಿನಲ್ಲಿ ಮೊಬೈಲ್ ಬಳಕೆ ನಿಷೇಧ ಇದ್ದರೂ ಆರೋಪಿಗಳ ಕೈಗೆ ಮೊಬೈಲ್ ಸಿಕ್ಕಿದ್ದು ಹೇಗೆ? ನೆಟ್ ಕನೆಕ್ಷನ್ ಹೇಗೆ ಬಂತು? ಅಲ್ಲದೇ ಹೊರಗಡೆಯಿಂದ ಜೈಲಿಗೆ ವಿಡಿಯೋ ಕರೆ ಮಾಡಿ ದರ್ಶನ್ ತೋರಿಸಿದ ಬಗ್ಗೆಯೂ ತನಿಖೆ ನಡೆಯಲಿದೆ.
ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಮಂಜುನಾಥ್ ಅವರಿಂದ ಮೂರನೇ ಪ್ರಕರಣದ ತನಿಖೆ ನಡೆಯಲಿದೆ. ಜೈಲು ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ತನಿಖೆ ನಡೆಸಲಿದ್ದಾರೆ. ಯಾರೆಲ್ಲ ಸಹಾಯ ಮಾಡಿದ್ದರೂ, ಇದರ ಹಿಂದೆ ಯಾರ ಕೈ ಇದೆ? ಹೇಗೆಲ್ಲ ಸಹಾಯವನ್ನು ಮಾಡುತ್ತಿದ್ದಾರೆ ಎಂಬುದರ ಕುರಿತು ತನಿಖೆ ನಡೆಯಲಿದೆ.
ಸಿಸಿಬಿ ಅಧಿಕಾರಿಗಳು ದಾಳಿಗೆ ಬಂದಿದ್ದಾಗ ಜೈಲಧಿಕಾರಿಗಳು ಅರ್ಧ ಗಂಟೆ ಒಳಗೆ ಬಿಡಲಿಲ್ಲ. ಈ ವೇಳೆ ಸಿಸಿಬಿ ಅಧಿಕಾರಿಗಳು ಏಕೆ ಕಾಯಬೇಕು ಎಂದು ಜೈಲು ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದಾರೆ. ಜೈಲು ಅಧೀಕ್ಷಕ ಬಂದಿಲ್ಲ, ಅವರಿಲ್ಲದೆ ಒಳಗೆ ಬಿಡಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ, ಸಿಸಿಬಿ ಅಧಿಕಾರಿಗಳು ಸುಮಾರು ಅರ್ಧಗಂಟೆ ಜೈಲಿನ ಬಾಗಿಲಿನಲ್ಲೇ ಕಾಯ್ದಿದ್ದಾರೆ.
ಬ್ಯಾರಕ್‌ನಲ್ಲಿ ನಾಲ್ಕು ರಟ್ಟಿನ ಬಾಕ್ಸ್ಗಳನ್ನು ಶಿಫ್ಟ್ ಮಾಡಿದ ಬಗ್ಗೆಯೂ ಜೈಲು ಸಿಬ್ಬಂದಿಯನ್ನು ಸಿಸಿಬಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಬಾಕ್ಸ್ಗಳಲ್ಲಿ ಕಸ ಇತ್ತು ಜೈಲು ಸಿಬ್ಬಂದಿ ಹೇಳಿದ್ದಾರೆ. ಆದರೆ, ಜೈಲಿನ ಯಾವ ಬ್ಯಾರಕ್ನಿಂದಲೂ ಕಸ ತೆಗೆದುಕೊಂಡು ಹೋಗಿಲ್ಲ, ಕೇವಲ ಬ್ಯಾರಕ್ ನಂಬರ್ 10 ರಿಂದ ಏಕೆ ಕಸ ತೆಗೆದುಕೊಂಡು ಹೋಗಿದ್ದೀರಿ ಎಂದು ಸಿಸಿಬಿ ಪೊಲೀಸರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಿಸಿಬಿ ಅಧಿಕಾರಿಗಳು ಪ್ರಾಥಮಿಕ ವರದಿ ನೀಡಿದ್ದಾರೆ. ಜೈಲು ಅಧಿಕಾರಿಗಳ ಈ ನಡೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿಯ ಮಾಹಿತಿ ಸೋರಿಕೆಯಾಗಿದೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆಂತರಿಕ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಸೂಚನೆ ನೀಡಿದ್ದಾರೆ. ತನಿಖೆ ನಡೆಸಿ ವರದಿ ನೀಡಲು ಸಿಸಿಬಿ ಹೆಚ್ಚುವರಿ ಆಯುಕ್ತ ಡಾ.ಚಂದ್ರಗುಪ್ತಗೆ ಸೂಚಿಸಿದ್ದಾರೆ.
Post a comment
Log in to write reviews