ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪ್ರೊ. ಪಂಡಿತ್ ರಾಜೀವ ತಾರಾನಾಥ್ ನಿಧನ
ಮೈಸೂರು: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ (92) ಅವರು ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು. ಇವರು ಅಂತಾರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನ ಪಡೆದಿದ್ದರು.
ಮೈಸೂರಿನ ಕುವೆಂಪುನಗರದ ಪಂಚಮಂತ್ರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ತಿಂಗಳ ಹಿಂದೆ ಕುಸಿದು ಬಿದ್ದು ಮೂಳೆ ಮುರಿದು ಕೊಂಡಿದ್ದರು. ಪಂಡಿತ್ ರಾಜೀವ ತಾರಾನಾಥ್ರವರು 15 ದಿನಗಳಿಂದ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 7.05ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮೇರು ಕಲಾವಿದರಾದ ಇವರು, ಸರೋದ್ ವಾದನದಲ್ಲಿ ಅಪ್ರತಿಮ ವಿದ್ವಾಂಸರು.ಇವರ ಸಂಗೀತ ಸೇವೆಗಾಗಿ ಪದ್ಮಶ್ರೀ, ನಾಡೋಜ ಸೇರಿ ಹತ್ತಾರು ಪ್ರಶಸ್ತಿಗಳು ಸಂದಿವೆ. ಮೈಸೂರಿನ ಕುವೆಂಪುನಗರದ ನಿವಾಸದಲ್ಲಿ ಬುಧವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 12 ಗಂಟೆವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶವಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ರಾಜೀವ್ ತಾರಾನಾಥ್ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ರಾಜೀವ್ ತಾರಾನಾಥರ ಅಗಲಿಕೆ. ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಸಂಗೀತಲೋಕಕ್ಕೆ ನಷ್ಟವಾಗಿದೆ.
Post a comment
Log in to write reviews