
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್‌ಡಿಎ ಮೈತ್ರಿಕೂಟದ ಕೇಂದ್ರ ಸರ್ಕಾರದ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ಅನ್ಯಾಯ ಸರಿಪಡಿಸಬೇಕು ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಆರ್. ಮೇಟಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದ ಐವರು ಸಂಸದರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಇದು ನಿಜಕ್ಕೂ ಸಂತಸದ ವಿಷಯ. ಆದ್ರೆ ಸದಾ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿರುವ ಉತ್ತರ ಕರ್ನಾಟಕ ಭಾಗದ ಒಬ್ಬರಿಗೆ ಮಾತ್ರ ಸಂಪುಟ ದರ್ಜೆಯ ಸ್ಥಾನ ನೀಡಲಾಗಿದೆ. ಆದ್ರೆ ದಕ್ಷಿಣ ಕರ್ನಾಟಕದ ಮೂರು ಮಂದಿ ಸಂಸದರಿಗೆ ಸಚಿವ ಸ್ಥಾನ ಹಾಗೂ ಒಬ್ಬರಿಗೆ ರಾಜ್ಯ ಸಭಾ ಸದಸ್ಯ ಸ್ಥಾನ ನೀಡಿ, ಮೇಲಾಗಿ ಸಚಿವ ಸ್ಥಾನ ನೀಡಿರುವುದು, ಉತ್ತರ ಕರ್ನಾಟಕ ಭಾಗಕ್ಕೆ ಸಾಮಾಜಿಕ ಹಾಗೂ ಪ್ರಾದೇಶಿಕತೆಯ ದೃಷ್ಟಿಯಿಂದ ಅನ್ಯಾಯವೇ ಸರಿ.
ಅಲ್ಲದೇ ಈ ಭಾಗದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಇಬ್ಬರಲ್ಲಿ ಒಬ್ಬರಿಗಾದರೂ ಕೇಂದ್ರ ಸಂಪುಟದಲ್ಲಿ ಅವಕಾಶ ನೀಡಬಹುದಿತ್ತು.
ಅಲ್ಲದೇ ಬಾಗಲಕೋಟೆಯಿಂದ ಸತತ ನಾಲ್ಕು ಬಾರಿ ಸಂಸದರಾಗಿರುವ ಪಿ.ಸಿ. ಗದ್ದಿಗೌಡರ್, ವಿಜಯಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ದಲಿತ ಸಮುದಾಯದ ಹಿರಿಯ ಸಂಸದರಾದ ರಮೇಶ್ ಜಿಗಜಿಣಗಿ, ಉತ್ತರ ಕರ್ನಾಟಕ ಭಾಗದವರೇ ಆಗಿರುವ ಚಿತ್ರದುರ್ಗ ಕ್ಷೇತ್ರದ ಸಂಸದ ದಲಿತ ನಾಯಕ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಲ್ಲಿ ಯಾರಿಗಾದರೂ ಸಂಪುಟದಲ್ಲಿ ಸ್ಥಾನ ನೀಡುತ್ತಾರೆ ಎಂಬ ನಿರೀಕ್ಷೆ ಉತ್ತರ ಕರ್ನಾಟಕ ಜನರದ್ದಾಗಿತ್ತು.
ಆದರೆ, ನೂತನ ಸಂಪುಟದಲ್ಲಿ ಈ ಭಾಗಕ್ಕೆ ಕೇವಲ ಒಬ್ಬರಿಗೆ ಮಾತ್ರ ಸಂಪುಟದಲ್ಲಿ ಅವಕಾಶ ಕಲ್ಪಿಸಿ, ಉತ್ತರ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ತೋರಿದಂತಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಕೇಂದ್ರದ ಬಿಜೆಪಿ ನಾಯಕರ ಗಮನಕ್ಕೆ ತರುವಂತೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
Poll (Public Option)

Post a comment
Log in to write reviews