
ಮಾಧೇಪುರ: ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ, ಆಕೆಯ ಕತ್ತನ್ನು ಸೀಳಿ ಕೊಂದು ರುಂಡವನ್ನು ಪೊಲೀಸ್ ಠಾಣೆಗೆ ತಂದ ಘಟನೆ ಬಿಹಾರದಲ್ಲಿ ನಡೆದಿದೆ. ದಾರಿ ಮಧ್ಯೆ ಇದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ, ಈ ಬಗ್ಗೆ ಶ್ರೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೌಟುಂಬಿಕ ಕಲಹದಿಂದ ಪತಿಯೇ ಪತ್ನಿಯ ತಲೆ ಕಡಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶ್ರೀನಗರ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ನಾರಾಯಣ್, ಪತ್ನಿಯನ್ನು ಕೊಂದ ಬಗ್ಗೆ ಪತಿ ತಪ್ಪೊಪ್ಪಿಕೊಂಡಿದ್ದಾನೆ. ಪತ್ನಿಯು ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ. ಈ ಬಗ್ಗೆ ಪದೆ ಪದೇ ತಿಳಿ ಹೇಳಿದರೂ, ಸರಿದಾರಿಗೆ ಬಾರದ ಕಾರಣ, ಕೋಪದ ಭರದಲ್ಲಿ ಪತ್ನಿಯನ್ನು ಹರಿತವಾದ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾಗಿ ಆರೋಪಿ ತಿಳಿಸಿದ್ದಾನೆ ಎಂದರು.
ಪತ್ನಿಯ ರುಂಡವನ್ನು ಕತ್ತರಿಸಿ ಬಳಿಕ ಪತಿಯು ಅದನ್ನು ಠಾಣೆಗೆ ತರುತ್ತಿದ್ದು. ಮಾರ್ಗ ಮಧ್ಯೆ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲ್ಲಿಗೆ ಬಂದ ಆರಕ್ಷಕರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಮಾಧೇಪುರ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಇದೇ ಗ್ರಾಮದಲ್ಲಿ ಒಂದೂವರೆ ವರ್ಷದ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಪಕ್ಕದ ಮನೆಯಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಕೋಪಗೊಂಡ ಪತಿ, ಪತ್ನಿ ಹಾಗೂ ಮೂರು ವರ್ಷದ ಮಗಳ ಕತ್ತು ಸೀಳಿ ಕೊಲೆ ಮಾಡಿದ್ದ. ಬಳಿಕ ಪತ್ನಿಯ ತಲೆಯನ್ನು ಗ್ರಾಮದ ಸೇತುವೆಯ ಮೇಲೆ ಇಟ್ಟು ಪತ್ನಿಯ ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿ ಪರಾರಿಯಾಗಿದ್ದ.
Poll (Public Option)

Post a comment
Log in to write reviews