
ಚೆನ್ನೈ: ಮಾಧವರಂನಲ್ಲಿ ಎದೆಹಾಲು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪ್ರೊಟೀನ್ ಪೌಡರ್ ಮಾರಾಟ ಮಳಿಗೆಯೊಂದರ ಮೇಲೆ ದಾಳಿ ನಡೆಸಿ ಬೀಗಮುದ್ರೆ ಹಾಕಿ, ಮಳಿಗೆಯ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರೊಟೀನ್ ಪೌಡರ್ ಮಾರಾಟ ಮಾಡಲು ಮಳಿಗೆಯ ಮಾಲೀಕರು ಪರವಾನಗಿ ಹೊಂದಿದ್ದರು. ಆದರೆ, ಎದೆ ಹಾಲನ್ನು ಪ್ರತಿ 50 ಎಂಎಲ್‌ನ ಬಾಟಲ್ ಅನ್ನು ₹500ರಂತೆ ಮಾರಾಟ ಮಾಡುತ್ತಿರುವುದು ಕಂಡುಬಂದಿತ್ತು. ಅಲ್ಲದೆ ಎದೆಹಾಲು ಸಂಗ್ರಹಿಸಿಟ್ಟಿರುವ ಬಗ್ಗೆ ಕೇಂದ್ರ ಪರವಾನಗಿ ಅಧಿಕಾರಿಗಳಿಗೆ ಕಳೆದ ವಾರ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆಯಲ್ಲಿ ಬಾಟಲ್‌ಗಳಲ್ಲಿ ಎದೆಹಾಲು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ದಾಳಿಯ ವೇಳೆ ಮಳಿಗೆಯಿಂದ 50 ಬಾಟಲ್ ಎದೆಹಾಲು ವಶಪಡಿಸಿಕೊಳ್ಳಲಾಗಿದೆ. ಇದರ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎದೆಹಾಲು ದಾನಿಗಳ ಬಗ್ಗೆ ಅಧಿಕಾರಿಗಳಿಗೆ ಕೆಲವರು ಮಾಹಿತಿ ನೀಡಿದ್ದಾರೆ. ಮೊಬೈಲ್ ಫೋನ್ ಸಂಖ್ಯೆಗಳನ್ನು ಪತ್ತೆ ಹಚ್ಚಿದ್ದಾರೆ. ನಿಯಮ ಉಲ್ಲಂಘನೆಯ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಎದೆ ಹಾಲು ಮಾರಾಟ ನಿಷೇಧಿಸಿರುವ ಬೆನ್ನಲ್ಲೇ, ಚೆನ್ನೈನಲ್ಲಿ ಇದೇ ಮೊದಲ ಬಾರಿಗೆ ಎದೆಹಾಲು ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ದೇಶದ ಆಹಾರ ನಿಯಂತ್ರಕ ಮೇ 24ರಂದು ಎದೆಹಾಲಿನ ಅನಧಿಕೃತ ವಾಣಿಜ್ಯೀಕರಣದ ವಿರುದ್ಧ ಎಚ್ಚರಿಕೆ ನೀಡಿತ್ತು.
ಎಫ್‌ಎಸ್‌ಎಸ್ ಕಾಯ್ದೆ 2006 ಮತ್ತು ನಿಯಮಗಳ ಅಡಿಯಲ್ಲಿ ಎದೆ ಹಾಲನ್ನು ಸಂಸ್ಕರಿಸಲು ಮತ್ತು ಮಾರಾಟ ಮಾಡಲು ಅನುಮತಿ ಇಲ್ಲ. ಹೀಗಾಗಿ ಎದೆಹಾಲಿನ ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಮತ್ತು ಎದೆಹಾಲು ಹಾಗೂ ಅದರ ಉತ್ಪನ್ನಗಳ ಮಾರಾಟ ತಕ್ಷಣವೇ ನಿಲ್ಲಿಸಬೇಕು ಎಂದು ಎಫ್‌ಎಸ್‌ಎಸ್‌ಎಐ ಆದೇಶ ಹೊರಡಿಸಿತ್ತು.
Poll (Public Option)

Post a comment
Log in to write reviews