ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ “ಎಲ್ಲರಿಗೂ ಉಚಿತ ವೀಸಾ” !
ನವದೆಹಲಿ: ನಡೆಯುತ್ತಿರುವ ಜಾಗತಿಕ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಬಾರಿ ಚಿನ್ನದ ಪದಕ ಗೆದ್ದರೆ ಎಲ್ಲರಿಗೂ ಉಚಿತ ವೀಸಾ ನೀಡುವುದಾಗಿ ಭಾರತೀಯ ಮೂಲದ ವೀಸಾ ಸ್ಟಾರ್ಟ್ ಅಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಭರವಸೆ ನೀಡಿದ್ದಾರೆ. ಅಟ್ಲಿಸ್ ಕಂಪನಿಯ ಸಿಇಒ ಮೋಹಕ್ ನಹ್ತಾ ಅವರು ಲಿಂಕ್ಡ್‌ಇನ್‌ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆದ್ದರೆ, ತಮ್ಮ ಗ್ರಾಹಕರಿಗೆ ಒಂದು ದಿನದ ಮಟ್ಟಿಗೆ ವೈಯಕ್ತಿಕವಾಗಿ ಉಚಿತ ವೀಸಾ ನೀಡುವುದಾಗಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮೋಹಕ್ ನಹ್ತಾ ಅವರು ಇತ್ತೀಚೆಗೆ (ಜುಲೈ 30ರಂದು) ಜಾಲತಾಣದಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದರು. ಹಲವು ನೆಟ್ಟಿಗರು ಈ ಬಗ್ಗೆ ಕಾಮೆಂಟ್ ಮಾಡುವ ಮೂಲಕ ಹೇಗೆ ಎಂಬ ಕೆಲವು ಪ್ರಶ್ನೆಗಳನ್ನು ಅವರ ಮುಂದಿಟ್ಟರು. ಇದೀಗ ವಿವರಣಾತ್ಮಕ ಮಾಹಿತಿಯುಳ್ಳ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ನೀರಜ್ ಚೋಪ್ರಾ ಚಿನ್ನ ಗೆದ್ದರೆ ಎಲ್ಲರಿಗೂ ಉಚಿತ ವೀಸಾ ನೀಡುವುದಾಗಿ ನಾನು ಈ ಹಿಂದೆ ಭರವಸೆ ನೀಡಿದ್ದೆ. ನಿಮ್ಮಲ್ಲಿ ಹೆಚ್ಚಿನವರು ಕೆಲವು ವಿವರಗಳನ್ನು ಕೇಳಿದ್ದರು. ಅದು ಹೇಗೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ. ಆಗಸ್ಟ್ 8 ರಂದು ನಡೆಯುವ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದರೆ, ನಮ್ಮ ಬಳಿ ಬರುವ ಎಲ್ಲ ಗ್ರಾಹಕರಿಕೆ ಇಡೀ ಒಂದು ದಿನಕ್ಕೆ ಒಂದು ಉಚಿತ ವೀಸಾ ನೀಡುತ್ತೇವೆ. ಶೂನ್ಯ ಖರ್ಚಿನ ಜೊತೆಗೆ ನಿಮ್ಮಿಷ್ಟದ ದೇಶಗಳನ್ನು ಒಳಗೊಳಗೊಂಡಿರುತ್ತದೆ. ಈ ಆಫರ್ ಪಡೆಯಲು ಗ್ರಾಹಕರು ಈ ಕ್ರಮಗಳನ್ನು ಪಾಲಿಸಿದರೆ ಸಾಕು'' ಎಂದು ಮೋಹಕ್ ನಹ್ತಾ ಕೆಲವು ಮಾಹಿತಿ ನೀಡಿದ್ದಾರೆ.
''ಎಲ್ಲಿಗೆ ಪ್ರಯಾಣಿಸಲು ಬಯಸುತ್ತೀರೋ ಅದನ್ನು ಆಯ್ಕೆ ಮಾಡಿ, ಕಾಮೆಂಟ್‌ಗಳಲ್ಲಿ ಕೆಳಗೆ ನಿಮ್ಮ ಇಮೇಲ್ ನೀಡಿದರೆ ಉಚಿತ ವೀಸಾ ಕ್ರೆಡಿಟ್‌ನೊಂದಿಗೆ ನಾವು ನಿಮ್ಮ ಖಾತೆಯನ್ನು ರಚಿಸುತ್ತೇವೆ'' ಎಂದು ಮೋಹಕ್ ಹೇಳಿಕೊಂಡಿದ್ದಾರೆ. ಮೋಹಕ್ ಅವರ ಲಿಂಕ್ಡ್‌ಇನ್ ಪೋಸ್ಟ್ ಹಲವರನ್ನು ಆಶ್ಚರ್ಯಗೊಳಿಸಿದರೆ, ಕೆಲವರ ಕುತೂಹಲಕ್ಕೆ ಕಾರಣವಾಗಿದೆ. ಕೆಲವು ನೆಟ್ಟಿಗರು ಸಿಇಒಗೆ ಸಲಹೆ ನೀಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 2020ರಲ್ಲಿ ಸ್ಥಾಪನೆಯಾದ ಈ ಕಂಪನಿಯು ಭಾರತದ ಮುಂಬೈ ಮತ್ತು ಗುರುಗ್ರಾಮ್ನಲ್ಲಿ ಕಚೇರಿಗಳನ್ನು ಹೊಂದಿದೆ. ವೀಸಾಗೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಈ ಕಂಪನಿಯು ಸಹಾಯ ಮಾಡುತ್ತದೆ. ವೀಸಾ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಲಭ ಮತ್ತು ವೇಗವಾಗಿ ಪಡೆಯಲು ಆನ್‌ಲೈನ್ ವೀಸಾ ಅಪ್ಲಿಕೇಶನ್ ಅನ್ನು ಸಹ ನೀಡುತ್ತದೆ.
ಟೋಕಿಯೊ ಒಲಿಂಪಿಕ್ಸ್ ಬಳಿಕ ನೀರಜ್ ಅವರು 2022ರ ಡೈಮಂಡ್ ಲೀಗ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 2023ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ನೀರಜ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಮ್ಮೆ ಪದಕ ತಂದು ಕೊಡುವ ನಿರೀಕ್ಷೆಯಲ್ಲಿದ್ದಾರೆ.
Post a comment
Log in to write reviews