ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಎರಡು ಪಕ್ಷ ಒಂದಾಗಿ ಕಳೆದ ಎರಡು ತಿಂಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷ ನಾಯಕ ಆರ್. ಅಶೋಕ್ ಶಾಸಕ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಅವರೇ ನಿಮ್ಮ ನೇತೃತ್ವದಲ್ಲಿ ರಾಜ್ಯದಲ್ಲಿ 4 ರಿಂದ 5 ಸಾವಿರ ಕೋಟಿ ಆಗಿದೆ. ವಾಲ್ಮೀಕಿ ಹಗರಣದಿಂದ 187 ಕೋಟಿ ಹಗರಣ ಆಗಿದೆ ಎಂದು ಜನ ಕೇಳುತ್ತಿದ್ದಾರೆ. ನಾವು ನಿಲುವಳಿ ಸೂಚನೆ ಮಂಡನೆ ಮಾಡಿದ್ದೆವು, ನಾವೇನು ನಿಮಗೆ ಬಹುಮತ ಇಲ್ಲ ಅಂತ ಕೇಳಿರಲಿಲ್ಲ. ಬಹುಮತ ತೆಗೆದುಕೊಂಡು ಏನು ಮಾಡುತ್ತೀರಿ. ಕಾನೂನಾತ್ಮಕವಾಗಿ ನಾವು ಮೊದಲ ಪ್ರಶ್ನೆ ಕೇಳಿದ್ದೆವು, ತಪ್ಪು ಮಾಡಿಲ್ಲ ಅಂತ ಎಳೆಎಳೆಯಾಗಿ ಹೇಳಲು ಇದ್ದ ಅವಕಾಶ ಇತ್ತು. ಅದು ಬಿಟ್ಟು ಹೇಳಿಕೆ ಕೊಡದೆ ಓಡಿಹೋದಿರಿ. ಸರ್ಕಾರದ ಅಧಿಕಾರ ಬಳಸಿಕೊಂಡು, ನಮಗಿಂತ ಮೊದಲು ಹೋಗಿ ಭಾಷಣ ಮಾಡಿದ್ದೀರಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ನೀವೇ ನೇರ ಹೊಣೆ. ರಾಷ್ಟ್ರಪತಿ ಆಡಳಿತ ಈಗಲೇ ಬರಲಿ, ಪೊಲೀಸರ ಕೈ ಕಟ್ಟಿದ್ದೀರಿ, ಬಿಜೆಪಿ-ಜೆಡಿಎಸ್ ಮಾತ್ರವಲ್ಲ, ರಾಜ್ಯದ ಎಲ್ಲಾ ಜನ ಕೂಗುತ್ತಿದ್ದಾರೆ. ಮಾಧ್ಯಮದಲ್ಲಿ ಎಲ್ಲಾ ದಾಖಲೆಗಳನ್ನು ತೋರಿಸುತ್ತಿದ್ದಾರೆ. ಪ್ರಾಸಿಕ್ಯೂಷನ್ ಅನುಮತಿ ಕೇಳಿರೋದು ಯಾರು? ಟಿ.ಜೆ ಅಬ್ರಹಾಂ, ಒಬ್ಬ ಅಲ್ಪಸಂಖ್ಯಾತ. ಸ್ನೇಹಮಯಿ ಕೃಷ್ಣಾ, ಪ್ರದೀಪ್ ಅವರು ಇದ್ದಾರೆ. ಕಾಗೆ ಬೆಳ್ಳಗಿದೆಯಾ, ಕಪ್ಪಗಿದೆಯಾ ಎಂದು ತೀರ್ಮಾನ ಮಾಡುವುದು ಬಿಜೆಪಿ ಅಲ್ಲ, ನ್ಯಾಯಾಲಯ ಎಂದು ಹೇಳಿದರು.
ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ ಕೊಟ್ಟಾಗ ಹಬ್ಬ ಮಾಡಿದ್ದೀರಿ, ಈಗ ಗಲಾಟೆ ಮಾಡುತ್ತೀರಾ? ಒಂದೇ ಸರ್ಕಾರ, ಒಂದೇ ಮಂತ್ರಿ ಮಂಡಲ, ಒಂದೇ ಕ್ಯಾಬಿನೆಟ್. ಎರಡು ನೀತಿ, ದ್ವಂದ್ವ ಯಾಕೆ? ನಾಗೇಂದ್ರಗೆ ಒಂದು ಕಾನೂನು, ಸಿದ್ದರಾಮಯ್ಯಗೆ ಒಂದು ಕಾನೂನಾ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಸದಾನಂದಗೌಡ, ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ, ತಿಪ್ಪೇಸ್ವಾಮಿ, ಎಂಎಲ್‌ಎ ನಾಡಗೌಡ, ಸಂಸದರಾದ ಪಿ.ಸಿ ಮೋಹನ್, ಲೆಹರ್ ಸಿಂಗ್, ಎಂಟಿಬಿ ನಾಗರಾಜ್, ಅಶ್ವತ್ಥ್ ನಾರಾಯಣ್ ಮತ್ತಿತರರು ಭಾಗವಹಿಸಿದ್ದರು.
Post a comment
Log in to write reviews