ಹೈದರಾಬಾದ್: ಹೈದರಾಬಾದ್ ಇಂದಿನಿಂದ ತೆಲಂಗಾಣದ ರಾಜಧಾನಿ ಆಗಿ ಮಾತ್ರ ಗುರುತಿಸಿಕೊಳ್ಳಲಿದೆ. ದಶಕದಿಂದ ಆಂಧ್ರ ಪ್ರದೇಶ ಹಾಗೂ ತೆಲಂಗಾಣಕ್ಕೆ ಜಂಟಿ ರಾಜಧಾನಿಯಾಗಿತ್ತು.
ಹೈದರಾಬಾದ್ ಈ ಹಿಂದಿನ ಅವಿಭಜಿತ ಆಂಧ್ರಪ್ರದೇಶಕ್ಕೆ ರಾಜಧಾನಿಯಾಗಿತ್ತು. ಕಳೆದ 10 ವರ್ಷದ ಹಿಂದೆ ಒಂದು ರಾಜ್ಯವಾಗಿದ್ದ ಈಗಿನ ಆಂಧ್ರ ಪ್ರದೇಶದಿಂದ ತೆಲಂಗಾಣ ವಿಭಜನೆಗೊಂಡು ಹೊಸ ರಾಜ್ಯವಾಗಿ ಉದಯವಾಗಿತ್ತು. ಈ ವೇಳೆಯಲ್ಲಿ ಹೈದರಾಬಾದ್ ಈ ಎರಡೂ ರಾಜ್ಯಗಳಿಗೆ ರಾಜಧಾನಿಯಾಗಿ ಗುರುತಿಸಿಕೊಂಡಿತ್ತು.
ಇಂದಿನಿಂದ ಆಂಧ್ರಪ್ರದೇಶಕ್ಕೂ ಹೈದರಾಬಾದ್ಗೂ, ರಾಜಧಾನಿಯ ವಿಚಾರವಾಗಿ ಯಾವುದೇ ಸಂಬಂಧ ಇರುವುದಿಲ್ಲ. ಎರಡು ತೆಲುಗು ರಾಜ್ಯಗಳ ಜಂಟಿ ರಾಜಧಾನಿಯಾಗಿದ್ದ ಹೈದರಾಬಾದ್ ಇನ್ನು ಮುಂದೆ ತೆಲಂಗಾಣದ ರಾಜಧಾನಿಯಾಗಿ ಮಾತ್ರ ಕಾರ್ಯನಿರ್ವಹಿಸಲಿದೆ.
2014 ರ ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆಯ ಪ್ರಕಾರ, ಇನ್ನು ಮುಂದೆ ಹೈದರಾಬಾದ್ ತೆಲಂಗಾಣ ರಾಜ್ಯದ ರಾಜಧಾನಿಯಾಗಿರುತ್ತದೆ ಮತ್ತು ಆಂಧ್ರ ಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿ ಇರುತ್ತದೆ. ಏಕೀಕೃತವಾಗಿ ಆಂಧ್ರಪ್ರದೇಶ 2014 ಫೆಬ್ರವರಿಯಲ್ಲಿ ವಿಂಗಡನೆಯಾಗಿತ್ತು. 2014ರಲ್ಲಿ ಸಂಸತ್ತಿನಲ್ಲಿ ಎಪಿ ಮರು ಸಂಘಟನೆ ಮಸೂದೆಯನ್ನು ಅಂಗೀಕರಿಸಿದ ನಂತರ, ಅದೇ ವರ್ಷದ ಜೂನ್ 2ರಂದು ಅಧಿಕೃತವಾಗಿ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. ಆಗ ಹೈದರಾಬಾದನ್ನು 10 ವರ್ಷಗಳ ಅವಧಿಗೆ ಎರಡೂ ರಾಜ್ಯಗಳಿಗೆ ರಾಜಧಾನಿಯಾಗಿ ಸ್ವೀಕರಿಸಲಾಗಿತ್ತು. 10 ವರ್ಷದ ನಂತರ ಇದು ಹೀಗೆ ಮುಂದುವರೆಯುವಂತಿಲ್ಲ ಎಂದು ತೀರ್ಮಾನವಾಗಿತ್ತು. ಆ ತೀರ್ಮಾನದಂತೆ ಇನ್ನು ಮುಂದೆ ಹೈದರಾಬಾದ್ ತೆಲಂಗಾಣಕ್ಕೆ ಮಾತ್ರ ರಾಜಧಾನಿಯಾಗಿ ಕಾರ್ಯನಿರ್ವಹಿಸಲಿದೆ.
ಇದೇ ವೇಳೆ ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಲಾಗಿದ್ದರೂ, ಅಲ್ಲಿ ಪೂರ್ಣ ಪ್ರಮಾಣದ ಕೆಲಸಗಳು ಇನ್ನೂ ನಡೆದಿಲ್ಲ.
Post a comment
Log in to write reviews