ನವರಾತ್ರಿ ಹಬ್ಬ ಇನ್ನು ಹತ್ತಿರದಲ್ಲಿದೆ .ಹಬ್ಬಗಳ ಸರಮಾಲೆ ತೆರೆದುಕೊಳ್ಳುವ ನವರಾತ್ರಿಗೆ ವಿಶೇಷ ತಿಂಡಿ ತಿನಿಸುಗಳೂ ಇರಲೇಬೇಕು. ಆದ್ದರಿಂದ ಈ ಬಾರಿ ನವರಾತ್ರಿಗೆ ನವಧಾನ್ಯಗಳಿಂದ ಉಸುಲಿ ಮಾಡಿ ನೈವೇದ್ಯವನ್ನು ಅರ್ಪಿಸಿದರೆ ವಿಶೇಷವಾಗಿರುತ್ತೆ.
ಆರೋಗ್ಯಕ್ಕೂ ಪೂರಕವಾಗಿರುವ ಈ ನವಧಾನ್ಯದ ಉಸುಲಿ ಹೇಗೆ ಮಾಡುವುದು ಎಂದು ತಿಳಿದುಕೊಳ್ಳಿ.
ನವಧಾನ್ಯ ಉಸುಳಿಗೆ ಬೇಕಾಗುವ ಪದಾರ್ಥಗಳು:
* ಹುರುಳಿ ಕಾಳು, ಅಲಸಂದೆ ಕಾಳು, ಹೆಸರು ಕಾಳು, ಕಿಡ್ನಿ ಬೀನ್, ತರಣಿ ಕಾಳು, ಒಣಗಿದ ಬಟಾಣಿ ಕಾಳು, ಸೋಯಾ, ಕಡಲೆ ಕಾಳು, ಕಾಬುಲ್ ಕಡಲೆ ಕಾಳು ತಲಾ 1 1/4 ಕಪ್.
* 2 ಚಮಚ ಹುರಿದು ಪುಡಿ ಮಾಡಿದ ಎಳ್ಳು
* 1 ಚಮಚ ಸಾಸಿವೆ
* 3-4 ಕತ್ತರಿಸಿದ ಹಸಿ ಮೆಣಸಿನ ಕಾಯಿ
* ತೆಂಗಿನ ತುರಿ
* ಕರಿಬೇವು, ಕೊತ್ತಂಬರಿ
* 2 ಚಮಚ ನಿಂಬೆ ರಸ
* ಎಣ್ಣೆ, ಉಪ್ಪು
ನವಧಾನ್ಯ ಉಸುಳಿ ಮಾಡುವ ವಿಧಾನ:
ಮೇಲೆ ತಿಳಿಸಿದ ಎಲ್ಲ ಧಾನ್ಯಗಳನ್ನು ನೀರಿನಲ್ಲಿ ನೆನೆಸಿ ನಂತರ ಸ್ವಲ್ಪ ಉಪ್ಪು ಬೆರೆಸಿ ಕುಕ್ಕರ್ ನಲ್ಲಿ ಬೇಯಿಸಬೇಕು. ನಂತರ ಅದನ್ನು ಕೆಳಗಿಳಿಸಿ ನೀರನ್ನು ಬಸಿದುಕೊಳ್ಳಬೇಕು.
ಪಾತ್ರೆಯೊಂದಕ್ಕೆ ಎಣ್ಣೆ ಹಾಕಿ ಕಾಯಿಸಿಕೊಂಡು ಅದಕ್ಕೆ ಸಾಸಿವೆ, ಕರಿಬೇವು, ಹಸಿರು ಮೆಣಸಿನ ಕಾಯಿ ಮತ್ತು ಎಳ್ಳಿನ ಪುಡಿಯನ್ನು ಹಾಕಿ ಹುರಿದುಕೊಳ್ಳಬೇಕು. ಬಸಿದ ಕಾಳುಗಳನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಹುರಿಯಬೇಕು. ಅವಶ್ಯಕವೆನಿಸಿದರೆ ಮಾತ್ರ ಸ್ವಲ್ಪ ಉಪ್ಪನ್ನು ಹಾಕಿಕೊಳ್ಳಬೇಕು.
ಈಗ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ ಅದಕ್ಕೆ ತೆಂಗಿನ ತುರಿ ಮತ್ತು ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಹಾಕಿಕೊಳ್ಳಬೇಕು. ಕೊನೆಯಲ್ಲಿ ಇದರ ಮೇಲೆ ನಿಂಬೆರಸ ಹಾಕಿ ಚೆನ್ನಾಗಿ ತಿರುಗಿಸಬೇಕು. ಈಗ ನವಧಾನ್ಯದ ಉಸುಳಿ ತಯಾರಾಗಿದೆ.
Post a comment
Log in to write reviews