2024-12-24 07:47:29

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಗುಡ್ಡ ಕುಸಿತ, ತಪ್ಪಿದ ಅನಾಹುತ: ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ

ಹಾಸನ: ಕಳೆದ ಮೂರು ದಿನಗಳಿಂದ ಭೋರ್ಗರೆದು ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ತಾಲೂಕು ಸೇರಿದಂತೆ ವಿವಿಧೆಡೆ ಜನಜೀವನ ಅಸ್ತವ್ಯಸ್ತವಾಗಿದೆ.

ಸಕಲೇಶಪುರದಲ್ಲಿ ಬುಧವಾರ ದಿನವಿಡೀ ಮಳೆ ಸುರಿದ ಮಳೆಗೆ ಹಲವೆಡೆ ಭೂ ಕುಸಿತ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಎರಡು ಕಡೆ ರಸ್ತೆ ಬಿರುಕು ಬಿಟ್ಟಿದೆ. ಶಿರಾಡಿಘಾಟ್ ಸಮೀಪ ಗುಡ್ಡ ಕುಸಿದಿದೆ. ಮುಂಜಾನೆ 6ರಿಂದ ಸಂಜೆ 6ರವರೆಗೆ ಸರಾಸರಿ 22 ಸೆಂ.ಮೀ. ಮಳೆ ದಾಖಲಾಗಿದೆ.

10ಕ್ಕೂ ಹೆಚ್ಚು ಕಡೆ ಕುಸಿದ ರಸ್ತೆ: ಬಾಳ್ಳುಪೇಟೆಯಿಂದ ಹೆಗ್ಗದ್ದೆವರೆಗೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಹಾಗೂ ನಿರ್ಮಾಣ ಹಂತದಲ್ಲಿರುವ ಹೆದ್ದಾರಿಯ ಸುಮಾರು 10ಕ್ಕೂ ಹೆಚ್ಚು ಸ್ಥಳಗಳಲ್ಲಿ ರಸ್ತೆ ಕುಸಿದಿದೆ. ಇಷ್ಟೇ ಅಲ್ಲದೆ ಸಕಷ್ಟು ಕಡೆ ಮನೆಗಳ ಮೇಲೆ ಮರಗಳು ಉರುಳಿವೆ. ಕಿರು ಸೇತುವೆಗಳು ಕೊಚ್ಚಿ ಹೋಗಿವೆ. ವಿದ್ಯುತ್​ ಕಡಿತದಿಂದ ಜನರು ತೊಂದರೆ ಅನುಭವಿಸುವಂತಾಗಿದೆ.

ಕೊಲ್ಲಹಳ್ಳಿ, ರಾಟೆಮನೆ, ಬಾಳ್ಳುಪೇಟೆ, ಸಕಲೇಶಪುರ ಬೈಪಾಸ್​, ತೋಟದಗದ್ದೆ, ಅನೇಮಹಲ್, ದೋಣಿಗಾಲ್, ಕಪ್ಪಳ್ಳಿ, ಕೆಸಗಾನಹಳ್ಳಿ, ದೊಡ್ಡತಪ್ಪಲೆ ಮಾರ್ಗದುದ್ದಕ್ಕೂ ಹೆದ್ದಾರಿಯ ಬದಿ ಗುಡ್ಡ ಕುಸಿತ ಉಂಟಾಗಿದೆ.

100 ಅಡಿ ಎತ್ತರದಿಂದ ಗುಡ್ಡ ಕುಸಿತ: ನಿನ್ನೆ ಸಂಜೆ ದೊಡ್ಡತಪ್ಪಲೆ ಬಳಿ ಸುಮಾರು 100 ಅಡಿ ಎತ್ತರದಿಂದ ಗುಡ್ಡ ಕುಸಿದು ಕೂದಲೆಳೆ ಅಂತರದಲ್ಲಿ ವಾಹನಗಳು ಅಪಾಯದಿಂದ ಪಾರಾಗಿವೆ. ರಸ್ತೆ ದಾಟುತ್ತಿದ್ದ ಎರಡು ಕಾರು ಮತ್ತು ಟ್ಯಾಂಕರ್​ ಲಾರಿ ಚಾಲಕರನ್ನು ಮತ್ತು ವಾಹನವನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಎಚ್ಚರಿಗೆ ಸೂಚನೆ: ಕಳೆದ 4-5 ವರ್ಷಗಳಿಂದ ಈ ಪ್ರದೇಶದಲ್ಲಿ ನಿರಂತರವಾಗಿ ಭೂಮಿ ಕುಸಿಯುತ್ತಿದೆ. ಸಕಲೇಶಪುರ ಪಟ್ಟಣದ ಅಜಾದ್ ರಸ್ತೆಯ ಮಲ್ಲಮ್ಮನ ಬೀದಿಯವರೆಗೆ ನೀರು ನಿಂತಿದೆ. ಮಳಲಿ, ಕೊಣ್ಣೂರು, ವಡೂರು, ಹೆನ್ನಲಿ ಸೇರಿದಂತೆ ನದಿ ಅಕ್ಕಪಕ್ಕದ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಜಾನೇಕೆರೆ, ಐಗೂರು, ಹಾಲೇಬೇಲೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಹರಿಯುವ ಕಿರು ಹಳ್ಳಗಳು ಸೇತುವೆ ಮೇಲೆ ಹರಿಯುತ್ತಿವೆ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಪಿಡಿಒಗಳು ದಿನದ 24 ಗಂಟೆಯೂ ಜಾಗೃತರಾಗಿರುವಂತೆ ಆಲೂರು, ಬೇಲೂರು ಮತ್ತು ಸಕಲೇಶಪುರ ತಹಶೀಲ್ದಾರ್​ಗೆ ಸೂಚನೆ ನೀಡಿದೆ.

ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಮಳೆ ಆಗುತ್ತಿರುವುದರಿಂದ ಹೇಮಾವತಿ ನದಿ ಪಾತ್ರದಲ್ಲಿ ನೀರು ನಿಲ್ಲುವ ಸಾಧ್ಯತೆ ಇದ್ದು, ನಿವಾಸಿಗಳಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಸಕಲೇಶಪುರದ ಉಪ ವಿಭಾಗಾಧಿಕಾರಿ ಸೂಚನೆ ನೀಡಿದೆ. ಮಳೆ, ಗಾಳಿಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆಗಳಿದ್ದರೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಬೇಕು. ಇಂತಹ ದೂರುಗಳು ಬಂದ ಕೂಡಲೇ ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆಯೂ ಜಿಲ್ಲಾ ಉಸ್ತುವಾರಿ ಸಚಿವರು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

 

 

Post a comment

No Reviews