ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ಗೆ ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಗಲಿಲ್ಲ. ಆದ ಕಾರಣ ವಕೀಲರು ಹೈಕೋರ್ಟ್‌ನಲ್ಲಿ ದರ್ಶನ್ ಪರ ಜಾಮೀನಿಗೆ ಅರ್ಜಿ ಹಾಕಿದ್ದರು. ಇಂದು (ಅಕ್ಟೋಬರ್ 22) ಮೊದಲ ಬಾರಿಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ನ್ಯಾಯಾಮೂರ್ತಿಗಳು ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ಮುಂದೂಡಿದ್ದಾರೆ. ಸಿಸಿಎಚ್ ನ್ಯಾಯಾಲಯದಲ್ಲಿ ಸಿವಿ ನಾಗೇಶ್ ದರ್ಶನ್ ಪರವಾಗಿ ವಾದ ಮಂಡಿಸಿದ್ದರು. ಈಗಲೂ ಸಹ ಅವರೇ ದರ್ಶನ್ ಪರವಾಗಿ ಹೈಕೋರ್ಟ್ನಲ್ಲಿಯೂ ವಾದ ಮಂಡಿಸುತ್ತಿದ್ದು, ದರ್ಶನ್ಗೆ ಜಾಮೀನು ಕೊಡಿಸುವ ಸತತ ಪ್ರಯತ್ನ ಮಾಡುತ್ತಿದ್ದಾರೆ.
ನ್ಯಾಯಾಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿರುವ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆದಿದೆ. ದರ್ಶನ್ ಪರವಾಗಿ ಸಿವಿ ನಾಗೇಶ್ ಅವರು ವಾದ ಮಂಡನೆ ಆರಂಭಿಸಿ, ದರ್ಶನ್ಗೆ ಬೆನ್ನು ಹುರಿ ನೋವಿನಿಂದ ಬಳಲುತ್ತಿದ್ದು, ಅವರನ್ನು ನಿನ್ನೆ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಶನ್ಗೆ ಚಿಕಿತ್ಸೆಯ ಅಗತ್ಯವಿದೆ. ಹಾಗಾಗಿ ಜಾಮೀನು ಕೋರುತ್ತಿದ್ದೇವೆ ಎಂದು ಹೇಳಿದರು. ಸಿವಿ ನಾಗೇಶ್ ಅವರ ಮಾತು ಆಲಿಸಿ, ಜೈಲಾಧಿಕಾರಿಗಳಿಂದ ದರ್ಶನ್‌ರ ಆರೋಗ್ಯ ಸ್ಥಿತಿಯ ವರದಿಯನ್ನು ಕೇಳಿದರು. ಬಳಿಕ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಲಾಯ್ತು.
ಅಕ್ಟೋಬರ್ 28ರ ಒಳಗಾಗಿ ಬಳ್ಳಾರಿ ಜೈಲು ಅಧಿಕಾರಿಗಳು ದರ್ಶನ್‌ರ ಆರೋಗ್ಯ ಸ್ಥಿತಿಯ ಬಗ್ಗೆ ವರದಿಯನ್ನು ಹೈಕೋರ್ಟ್ಗೆ ನೀಡಬೇಕಿದ್ದು, ವರದಿ ಆಧರಿಸಿ ದರ್ಶನ್ಗೆ ಜಾಮೀನು ನೀಡಬೇಕೊ ಇಲ್ಲವೋ ಅಥವಾ ಜೈಲಿನಲ್ಲಿಯೇ ಚಿಕಿತ್ಸೆ ಮುಂದುವರೆಸಬೇಕೋ ಎಂಬುದನ್ನು ನಿಶ್ಚಯ ಮಾಡಲಾಗುತ್ತದೆ.
Post a comment
Log in to write reviews