ಇನ್ಮುಂದೆ ವಾಹನಗಳಿಗೆ ಈ ರೀತಿ ಹೆಡ್ ಲೈಟ್ ಕಡ್ಡಾಯ : ನಿಯಮ ಉಲ್ಲಂಘಿಸಿದರೆ ದಂಡ ತೆರಬೇಕು ಎಂದ ರಾಜ್ಯ ಸರ್ಕಾರ.
ಬೆಂಗಳೂರು: ರಸ್ತೆ ನಿಯಮಗಳನ್ನು ಪಾಲಿಸದೇ ಪ್ರಖರ ಬೆಳಕು ಹರಡುವ ಎಲ್ಇಡಿ ಹೆಡ್ ಲೈಟ್ ವಾಹನಗಳಿಗೆ ಬಳಸುವುದರಿಂದ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಹೆಚ್ಚುತ್ತಿದ್ದು ಅದನ್ನು ಕಡಿಮೆ ಮಾಡಲು ಇನ್ನು ಮುಂದೆ ಎಲ್ಲಾ ವಾಹನಗಳಿಗೆ ಸಿಎಂವಿ ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡದಂತೆ ಎಲ್‌ಇಡಿ ದೀಪಗಳನ್ನು ಅಳವಡಿಸುವ ಕುರಿತಂತೆ ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಲವಾರು ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತಿದ್ದು ಇದರಿಂದ ಎದುರು ಬದಿಯಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಗುತ್ತಿದ್ದು ಇದರಿಂದ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದೆ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ. ಈ ಪೈಕಿ ಪ್ರಮುಖವಾಗಿ ಭಾರಿ ಗಾತ್ರ ವಾಹನಗಳಾದ ಲಾರಿ, ಟ್ರಕ್. ಬಸ್ ಮುಂತಾದವುಗಳು ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸುತ್ತಿರುವುದರಿಂದ ಇತರ ವಾಹನ ಚಾಲಕರುಗಳಿಗೆ ವಾಹನ ಚಲಾಯಿಸಲು ತೊಂದರೆಯಾಗುತ್ತಿರುತ್ತದೆ. ಎಲ್ಲಾ ವಾಹನ ಸವಾರರು ತಮ್ಮ ತಮ್ಮ ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡದಂತೆ ಅಳವಡಿಸಬೇಕಾಗಿರುವ ಹೆಡ್ ಲೈಟ್ ಗಳನ್ನೇ ಅಳವಡಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಸಿಎಂವಿ ಕಾಯ್ದೆಯಲ್ಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ವಾಹನ ಸವಾರರ ವಿರುದ್ಧ ಐಎಂವಿ ಕಾಯ್ದೆಯ ಕಲಂ 177 ರಡಿ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Post a comment
Log in to write reviews