2024-12-25 08:35:51

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅಂಗೈನಲ್ಲಿದೆ ಆರೋಗ್ಯ-ಉತ್ತಮ ಆರೋಗ್ಯಕ್ಕಾಗಿ ಕೆಲವು ಮನೆಮದ್ದುಗಳು 

ಆರೋಗ್ಯವೇ ಭಾಗ್ಯ ಎನ್ನುವ ನಾಣ್ಣುಡಿಯಿದೆ.  ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸು ನೆಲೆಸಿರುತ್ತದೆ.ಅರೋಗ್ಯ ನಮ್ಮ ಜೀವನದ ಅವಿಭಾಜ್ಯ ಅಂಗ. ಆರೋಗ್ಯ ಒಂದಿದ್ದರೆ ಆಗ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಅನಾರೋಗ್ಯ ದೇಹವನ್ನು ಕಾಡುತ್ತ ಇದ್ದರೆ ಆಗ ಯಾವ ಕೆಲಸ ಮಾಡಲು ಮನಸ್ಸು ಬರದು. ಹೀಗಾಗಿ ಆರೋಗ್ಯಕ್ಕೆ ನಾವೆಲ್ಲರೂ ಮೊದಲ ಆದ್ಯತೆ ನೀಡಬೇಕಾಗಿದೆ.
ಜೀವನಶೈಲಿ ಮತ್ತು ಕೆಲವೊಂದು  ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಹಿತ್ತಲ ಮನೆಯ ಮದ್ದು ಮದ್ದಲ್ಲವೆ ಎಂಬಂತೆ ನಾವೂ ನಿತ್ಯ ಬಳಸುವ ಹಣ್ಣು ,ಸೊಪ್ಪು,ತರಕಾರಿ ಆಹಾರ ಪದಾರ್ಥಗಳಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು. ಅಂತಹ ಉತ್ತಮ ಆರೋಗ್ಯಕ್ಕಾಗಿ ಕೆಲವೊಂದಷ್ಟು ಮನೆಮದ್ದುಗಳು ಇಲ್ಲಿವೆ . 
ಸೌತೆಕಾಯಿ
ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಮನವಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು.
ಏಲಕ್ಕಿ
ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರು ಏಲಕ್ಕಿ ಸೇವಿಸಿದರೆ ಶಮನಗೊಳ್ಳುವುದು. ಏಲಕ್ಕಿಯಿಂದ ಆಹಾರ ಜೀರ್ಣವಾಗಿ ಬಾಯಿಗೆ ರುಚಿಯುಂಟಾಗುತ್ತದೆ. ಒಣಕೆಮ್ಮು ಕಾಣಿಸಿಕೊಂಡಾಗ ಏಲಕ್ಕಿ ಪುಡಿಗೆ ಸ್ವಲ್ಪ ಶುಂಠಿ ಪುಡಿಯನ್ನು ಸೇರಿಸಿ ಸೇವಿಸಿದರೆ ಉತ್ತಮ ಪರಿಣಾಮ ಬೀರುವುದು. ಮೇಲಿಂದ ಮೇಲೆ ಭೇದಿಯಾಗುತ್ತಿದ್ದರೆ ಸ್ವಲ್ಪ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ.
ಕಾಳುಮೆಣಸು
ಮೆಣಸನ್ನು ಚೆನ್ನಾಗಿ ಪುಡಿ ಮಾಡಿ ಶುಂಠಿಯ ರಸದೊಡನೆ ಸೇವಿಸುವುದರಿಂದ ಅಜೀರ್ಣವು ನಿವಾರಣೆಯಾಗುತ್ತದೆ. ಕೆಲವು ಮೆಣಸಿನ ಕಾಳುಗಳನ್ನು ನೀರಿನಲ್ಲಿ ತೇಯ್ದು ಮೊಡವೆಗಳಿರುವ ಜಾಗಕ್ಕೆ ಹಚ್ಚಿದರೆ ವಾಸಿಯಾಗುತ್ತವೆ. ಹೊಟ್ಟೆಯಲ್ಲಿ ಜಂತುಹುಳುಗಳ ಉಪಟಳ ಜಾಸ್ತಿಯಾದಾಗ ಬೆಳಗ್ಗೆ ಮತ್ತು ರಾತ್ರಿ ಮೆಣಸಿನ ಕಷಾಯವನ್ನು ಕುಡಿಯುವುದು ಪರಿಣಾಮಕಾರಿ.
ಈರುಳ್ಳಿ
ಊಟದ ಜೊತೆ ಹಲವು ದಿನಗಳವರೆಗೆ ಪ್ರತಿನಿತ್ಯ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ರಕ್ತಹೀನತೆ ವಾಸಿಯಾಗುತ್ತದೆ. ಪಟಾಕಿ ಸಿಡಿದು ಉಂಟಾದ ಗಾಯಗಳಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ. ಮೂಗಿನಿಂದ ಆಗಾಗ್ಗೆ ರಕ್ತ ಒಸರುತ್ತಿದ್ದರೆ, ಮೂಗಿಗೆ ಒಂದೆರಡು ತೊಟ್ಟು ಈರುಳ್ಳಿ ರಸವನ್ನು ಹಾಕುವುದರಿಂದ ರಕ್ತ ಒಸರುವುದು ನಿಲ್ಲುವುದು.
ಹಸಿಶುಂಠಿ
ಶೀತ ಅಥವಾ ಇನ್ನಾವುದೇ ತೊಂದರೆಗಳಿಂದ ಗಂಟಲು ಕಟ್ಟಿ ಸರಿಯಾಗಿ ಮಾತನಾಡಲು ತೊಂದರೆಯಾದರೆ, ಹಸಿಶುಂಠಿ, ಲವಂಗ ಮತ್ತು ಸ್ವಲ್ಪ ಅಡುಗೆ ಉಪ್ಪು ಸೇರಿಸಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿದರೆ ಗಂಟಲು ಕಟ್ಟುವುದು ನಿವಾರಣೆಯಾಗುತ್ತದೆ. ಶುಂಠಿ ಸುಟ್ಟು ಬೂದಿ ಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಹಲ್ಲುಜ್ಜುವುದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ.
ಮೆಂತ್ಯಸೊಪ್ಪು
ಸಕ್ಕರೆ ರೋಗ ನಿಯಂತ್ರಣದಲ್ಲಿ ಮೆಂತ್ಯಸೊಪ್ಪು ಸಹಕಾರಿ. ಸಕ್ಕರೆ ಕಾಯಿಲೆ ಕಾಣಿಸಿಕೊಂಡ ಆರಂಭದಲ್ಲಿಯೇ ಪ್ರತಿದಿನ ಬೆಳಗ್ಗೆ ಮೆಂತ್ಯ ರಸವನ್ನು ಕುಡಿಯುತ್ತಾ ಬಂದರೆ ಪರಿಣಾಮ ಬೀರುವುದು, ಮೆಂತ್ಯಸೊಪ್ಪಿನಂತೆಯೇ ಮೆಂತ್ಯದ ಕಾಳು ಕೂಡ ಔಷಧೀಯ ಗುಣಗಳನ್ನು ಹೊಂದಿದೆ.
ಸಾಸಿವೆ
ಹಲ್ಲು ನೋವಿರುವವರು ಸ್ವಲ್ಪ ಸಾಸಿವೆ ಕಾಳನ್ನು ಆಗಿದು ಸ್ವಲ್ಪ ಹೊತ್ತಿನ ನಂತರ ಉಗಿಯಬೇಕು. ಜೊತೆಗೆ ಇದು ಹಸಿವನ್ನೂ ಹೆಚ್ಚಿಸುತ್ತದೆ. ಉಪ್ಪಿನಕಾಯಿಯಲ್ಲಿ ಸಾಸಿವೆಯನ್ನು ಸ್ವಲ್ಪ ಹೆಚ್ಚು ಬಳಸಿದರೆ, ಬೇಗ ಕೆಡುವುದಿಲ್ಲ. ಉಪ್ಪಿನಕಾಯಿ ಹಾಳಾಗಲು ಆಸ್ಪರ್ಜಲಿನ್ ಎಂಬ ಶಿಲೀಂಧ್ರ ಕಾರಣವಾಗಿದ್ದು, ಇದು ಬೆಳೆಯುವುದನ್ನು ಸಾಸಿವೆ ತಡೆಯುತ್ತದೆ.
ಗೋಧಿ
ಗೋಧಿ ಹಿಟ್ಟಿನ ಚಪಾತಿ ತಿಂದರೆ ಹೊಟ್ಟೆಯಹುಣ್ಣು ನಿವಾರಣೆಯಾಗುವುದು, ಹಲ್ಲು ಮತ್ತು ವಸಡುಗಳಿಗೆ ಶಕ್ತಿ ಬರುವುದು. ಗೋಧಿ ಹಿಟ್ಟಿನ ತಂಬಿಟ್ಟು ಮಾಡಿಕೊಂಡು ತಿಂದರೆ ಕೀಲು ಮತ್ತು ಎಲುಬು ನೋವು ಶಮನಗೊಳ್ಳುವುದು.
ಹೀಗೆ ನಿತ್ಯಬಳಕೆ ಮಾಡುವ ವಸ್ತುಗಳನ್ನ ಬಳಸಿಕೊಂಡು ಉತ್ತಮ ಆರೋಗ್ಯ ಕಾಳಜಿ ವಹಿಸಬಹುದು,ಅಷ್ಟೇ ಅಲ್ಲದೆ 2019-20 ರಲ್ಲಿ ಇಡೀ ವಿಶ್ವವನ್ನೇ ಬೆಂಬಿಡದಂತೆ ಕಾಡಿದ ಕೋವಿಡ್ ಇಂದ ಭಾರತೀಯರ ಆರೋಗ್ಯ ಕಾಪಾಡುವಲ್ಲಿ ಮನೆಮದ್ದು ಪ್ರಮುಖ ಪಾತ್ರವಹಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ.ಆ ವೇಳೆ ಭಾರತೀಯರು ಅಮೃತಬಳ್ಳಿ ಕಷಾಯ, ಶುಂಠಿ, ಲವಂಗ, ಕಾಳುಮೆಣಸು, ಕೊತ್ತಂಬರಿ ಮೊದಲಾದ ಮಸಾಲೆ ಪದಾರ್ಥಗಳ ಕಷಾಯ, ನೆಲನೆಲ್ಲಿ ಸೊಪ್ಪಿನ ತಂಬುಳಿಯಿಂದ ಹಿಡಿದು ಅನೇಕ ರೀತಿಯ ಮನೆಮದ್ದುಗಳ ನೆರವಾಗಿದ್ದವು. 

 ವಿನುತಾ ಹೆಚ್.ಎಲ್

ಡಿಜಿಟಲ್‌ ಸಮಯ
 

Post a comment

No Reviews