ಅರುಣಾಚಲದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಜಯ: ಸಿಕ್ಕಿಂ ನಲ್ಲಿ ಎಸ್‌ಕೆಎಂ ಪಕ್ಷಕ್ಕೆ ಜಯ
ನವದೆಹಲಿ: ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಇಂದು (ಜೂನ್ 2) ನಡೆದಿದ್ದು ಎರಡೂ ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷಗಳು ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಸತತ ಮೂರನೇ ಗೆಲುವು ದಾಖಲಿಸಿ, 38 ಸ್ಥಾನ ಪಡೆದುಕೊಂಡು ಇತರ 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸಿಕ್ಕಿಂನಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) 32 ಸ್ಥಾನಗಳಲ್ಲಿ 20 ಸ್ಥಾನ ಗೆದ್ದು ಕೊಂಡಿದೆ.
ಆಯೋಗದ ಮಾಹಿತಿಯ ಪ್ರಕಾರ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 60 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದಿದೆ. ಮೊದಲು 10 ಅವಿರೋಧವಾಗಿ ಗೆದ್ದುಕೊಂಡಿತ್ತು. ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) ಎರಡು ಸ್ಥಾನಗಳನ್ನು ಗೆದ್ದು ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) ಎರಡು ಸ್ಥಾನಗಳಲ್ಲಿ ಗೆದ್ದಿದ್ದರೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಸಿಐ ಅಂಕಿಅಂಶಗಳ ಪ್ರಕಾರ ಸ್ವತಂತ್ರ ಅಭ್ಯರ್ಥಿಗಳು ಒಂದು ಸ್ಥಾನ ಗೆದ್ದಿದ್ದಾರೆ ಮತ್ತು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅವಿರೋಧವಾಗಿ ಆಯ್ಕೆಯಾದ 10 ಬಿಜೆಪಿ ಶಾಸಕರಲ್ಲಿ ಮುಕ್ತೋ ದಿಂದ ಮುಖ್ಯಮಂತ್ರಿ ಪೆಮಾ ಖಂಡು, ಚೌ ಕಮ್ನಿಂದ ಉಪಮುಖ್ಯಮಂತ್ರಿ ಚೌ ನಾ ಮೇ, ಇಟಾನಗರದಿಂದ ಟೆಚಿ ಕಾಸೊ, ತಾಲಿಹಾದಿಂದ ನ್ಯಾತೋ ದುಕಾಮ್ ಮತ್ತು ರೋಯಿಂಗ್ನಿಂದ ಮುಚು ಮಿಥಿ ಸೇರಿದ್ದಾರೆ.
ಎಪ್ರಿಲ್ 19ರಂದು ಇಲ್ಲಿ ಚುನಾವಣೆ ನಡೆದಿತ್ತು. ಸಿಕ್ಕಿಂ ವಿಧಾನಸಭೆಯಲ್ಲಿ ಎಸ್‌ಕೆಎಂ ಬಹುಮತದ ಗಡಿ ಮುಟ್ಟಿದ್ದು, 11 ಸ್ಥಾನಗಳಲ್ಲಿ ಮುಂದಿದೆ. ಪವನ್ ಕುಮಾರ್ ಚಾಮ್ಲಿಂಗ್ ಅವರ ಎನ್‌ಡಿಎಫ್ ಇಲ್ಲಿಯವರೆಗೆ ಒಂದು ಸ್ಥಾನ ಗೆದ್ದಿದೆ. ಸಿಕ್ಕಿಂ ನಲ್ಲಿ ಪ್ರಮುಖ ಸ್ಪರ್ಧೆಯು ಆಡಳಿತಾರೂಢ ಎಸ್‌ಕೆಎಂ ಮತ್ತು ಪವನ್ ಕುಮಾರ್ ಚಾಮ್ಲಿಂಗ್ ಅವರ ಎಸ್‌ಡಿಎಫ್ ನಡುವೆ ಇತ್ತು. ಈಶಾನ್ಯ ರಾಜ್ಯದ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
Post a comment
Log in to write reviews