
ಬೆಂಗಳೂರು: ಓಡಾಡುವ ರಸ್ತೆಯಲ್ಲಿ ಗುಟ್ಕಾ ಉಗಿಯುವುದು ಹಾಗೂ ಕಸ ಎಸೆಯುವ ವಿಷಯಕ್ಕೆ ವೃದ್ದನನ್ನು ಯುವಕನೊಬ್ಬ ಮಚ್ಚಿನಿಂದ ಕೊಂದ ದಾರುಣ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
ಇಂದು(ಶುಕ್ರವಾರ ಆ.09) ಬೆಳಿಗ್ಗೆ 9ಗಂಟೆಗೆ ಈ ದುರ್ಘಟನೆ ನಡೆದಿದ್ದು, ಹತ್ಯೆಯಾದ ವೃದ್ದ ಸಿದ್ದಪ್ಪ(70) ಹಾಗೂ ಆರೋಪಿ ತುಮಕೂರು ಜಿಲ್ಲೆಯ ಶಿರಾದ ಪುನೀತ್(24) ಎಂದು ತಿಳಿದು ಬಂದಿದೆ.
ಕಳೆದ 10 ವರ್ಷಗಳ ಹಿಂದೆ ಪ್ರತಿಷ್ಠಿತ ಹಿಮಾಲಯ ಡ್ರಗ್ಸ್ ಕಂಪನಿಯಿಂದ ನಿವೃತ್ತಿ ಹೊಂದಿದ್ದ ವೃದ್ದ, ನಂತರ ತಮ್ಮ ಬಳಿಯಿದ್ದ ಸುಮಾರು 10 ರಿಂದ 15 ಮನೆಯನ್ನು ಬಾಡಿಗೆ ಕೊಟ್ಟು, ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ಸಾಗಿಸುತ್ತಿದ್ದರು. ಸ್ವಚ್ಚತೆ ವಿಷಯದಲ್ಲಿ ಬಾಡಿಗೆ ಮನೆಯವರ ಜೊತೆ ಸಣ್ಣಪುಟ್ಟ ಗಲಾಟೆ ಬಿಟ್ಟರೆ ಬೇರೆ ಯಾವುದೇ ತಕರಾರು ಇರಲಿಲ್ಲ. ಇಂದು ಬೆಳಗ್ಗೆ ಆರೋಪಿ ಶಿರಾದ ಪುನೀತ್ ಕಸ ತುಂಬಿದ ಕವರ್ ಎಸೆದು, ರಸ್ತೆಯಲ್ಲೇ ಗುಟ್ಕಾ ಉಗಿದು ಹೋಗುತ್ತಿದ್ದ. ಈ ವೇಳೆ ಹಿಂದೆ ಬರುತ್ತಿದ್ದ ಸಿದ್ದಪ್ಪ ಯುವಕನಿಗೆ ಬೈದಿದ್ದಾನೆ. ಇಷ್ಟಕ್ಕೆ ಕೋಪಿತಗೊಂಡ ಯುವಕ ಸಮೀಪದ ಮನೆಯಿಂದ ಮಚ್ಚು ತಂದು ವೃದ್ದನ ಕುತ್ತಿಗೆಯನ್ನ ಕಡಿದು ಬರ್ಬರ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ಮನೆಗೆ ತೆರಳಿ ತನ್ನ ತಾಯಿಯ ಜೊತೆ ಚಿಕ್ಕಬಿದರಕಲ್ಲಿನಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ತಲೆಮರೆಸಿಕೊಳ್ಳುವಾಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೀಗ ಕೊಲೆ ಅರೋಪಿ ಪುನೀತ್ನನ್ನು ವಶಕ್ಕೆ ಪಡೆದು ವಿಚಾರಣೆ ಶುರುಮಾಡಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಸೀನ್ ಅಫ್ ಕ್ರೈಂ ಟೀಮ್ ತನಿಖಾ ಕಾರ್ಯಚರಣೆ ನಡೆಸುತ್ತಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Poll (Public Option)

Post a comment
Log in to write reviews