
ಬೆಂಗಳೂರು: ನಾಗಸಂದ್ರದಿಂದ ಮಾದಾವರವರೆಗಿನ ನಮ್ಮ ಮೆಟ್ರೋದ 3.7-ಕಿಮೀ ಹಸಿರುವ ಮಾರ್ಗ ವಿಸ್ತರಣೆಯ ವಾಣಿಜ್ಯ ಕಾರ್ಯಾಚರಣೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಪೂರ್ಣವಾಗಲಿವೆ ಎನ್ನಲಾಗಿದೆ.
ನಿರ್ಣಾಯಕ ಮೂಲಸೌಕರ್ಯ ಮತ್ತು ಪರೀಕ್ಷಾ ಕಾರ್ಯಗಳು ಇನ್ನೂ ಪೂರ್ಣಗೊಂಡಿಲ್ಲದ ಕಾರಣದಿಂದಾಗಿ ಕಾರ್ಯಾಚರಣೆ ತಡವಾಗಿದೆ. ಈ ಹಿಂದೆ ಜುಲೈ ಅಂತ್ಯದ ವೇಳೆಗೆ ಕಾರ್ಯಾಚರಣೆ ಆರಂಭವಾಗಲಿದೆ ಎನ್ನಲಾಗಿತ್ತು. 298 ಕೋಟಿ ರೂ.ಗಳ ವೆಚ್ಚದ ಈ ಮಾರ್ಗ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ) ಮತ್ತು ಮಾದಾವರ (BIEC) ಮೂರು ನಿಲ್ದಾಣ ಒಳಗೊಂಡಿದೆ. ಈ ಪೈಕಿ ಎರಡು ನಿಲ್ದಾಣ ಪೂರ್ಣಗೊಂಡಿದ್ದರೆ, ಮಾದಾವರದಲ್ಲಿ ಇನ್ನೂ ಕೆಲವು ಕೆಲಸಗಳು ನಡೆಯುತ್ತಿವೆ.
ಅಂಚೆಪಾಳ್ಯ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಹತ್ತಿರವಾಗಿಯೇ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದರು. ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್‌ನೊಂದಿಗಿನ ಒಪ್ಪಂದ ರದ್ದುಗೊಳಿಸಿದ್ದು, ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ನೈಸ್ ರಸ್ತೆಯ ಮೇಲೆ ಹಾದುಹೋಗಲು ಮಾರ್ಗಕ್ಕೆ ಅನುಮತಿ ನೀಡದಿರುವುದು, ಚುನಾವಣೆಗಳು ಮತ್ತು ಕಾರ್ಮಿಕರು ಊರುಗಳಿಗೆ ತೆರಳಿದ್ದರಿಂದ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಈ ಸಣ್ಣ ಮಾರ್ಗ ಆಗಸ್ಟ್ 2019 ರಲ್ಲಿಯೇ ಜನರ ಬಳಕೆಗೆ ಲಭ್ಯವಿರಬೇಕಿತ್ತಾದರೂ ಹಲವು ಸಮಸ್ಯೆಯಿಂದ 5 ವರ್ಷ ತಡವಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಈ ಮಾರ್ಗ ಹೆಚ್ಚು ಸಹಾಯಕವಾಗಿದೆ. ನೆಲಮಂಗಲ, ಮಾಕಳಿ ಹಾಗೂ ಮಾದನಾಯಕನಹಳ್ಳಿ ನಿವಾಸಿಗಳು ಮತ್ತು ತುಮಕೂರಿನಿಂದ ಬೆಂಗಳೂರಿಗೆ ಪ್ರವೇಶಿಸುವವರು ಮಾದಾವರ ನಿಲ್ದಾಣದಲ್ಲಿ ರೈಲು ಹತ್ತಿ ನಗರದ ಹೃದಯಭಾಗಕ್ಕೆ ಸಂಪರ್ಕ ಹೊಂದಬಹುದು.
Poll (Public Option)

Post a comment
Log in to write reviews