ದೂದ್ ಸಾಗರ-ಸೋನಾಲಿಂ ಮಧ್ಯೆ ಹಳಿ ತಪ್ಪಿದ ಗೂಡ್ಸ್ ರೈಲು: ಕಲ್ಲಿದ್ದಲು ವ್ಯರ್ಥ, ಬೆಳಗಾವಿ ಹುಬ್ಬಳ್ಳಿ ಮಾರ್ಗದ ರೈಲುಗಳು ವ್ಯತ್ಯಯ

ಉತ್ತರಕನ್ನಡ: ದೂದ್ ಸಾಗರ ಹಾಗೂ ಸೋನಾಲಿಂ ಮಾರ್ಗ ಮಧ್ಯೆ ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ಬೆಳಗಾವಿ ಹುಬ್ಬಳ್ಳಿ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ತುಸು ವ್ಯತ್ಯಯವಾಗಿದೆ. ಗೋವಾದ ವಾಸ್ಕೋದಿಂದ ಹೊಸಪೇಟೆಗೆ ತೆರಳುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ 11 ಬೋಗಿಗಳು ನೆಲಕ್ಕುರುಳಿ ಕಲ್ಲಿದ್ದಲು ವ್ಯರ್ಥವಾಗಿದೆ.
ಗೋವಾದ ವಾಸ್ಕೋದಿಂದ ಹೊಸಪೇಟೆ ಬಳಿಯ ಜಿಂದಲ್ ಕಂಪನಿಗೆ ಕಲ್ಲಿದ್ದಲು ಕೊಂಡೊಯ್ಯುತಿದ್ದ ರೈಲು ಇದಾಗಿದೆ.
ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯ ಬೆಳಗಾವಿ, ಹುಬ್ಬಳ್ಳಿ ಮಾರ್ಗದ ರೈಲು ಸಂಚಾರ ಸಮಯ ಬದಲಾಗಿದೆ. ಗೋವಾ ಮೂಲಕ ಸಂಚರಿಸುವ ಎರಡು ಟ್ರೈನ್ಗಳ ಸಂಚಾರ ಬಂದ್ ಆಗಿದೆ.
ಗೂಡ್ಸ್ ರೈಲು ಹಳಿತಪ್ಪಿದೆ ಬಗ್ಗೆ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕನಮಡಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ರೈಲು ಸಂಖ್ಯೆ 17420/17022 ವಾಸ್ಕೋಡಗಾಮಾ-ತಿರುಪತಿ/ಹೈದರಾಬಾದ್ ವೀಕ್ಲಿ ಎಕ್ಸ್‌ಪ್ರೆಸ್ ಸೇರಿದಂತೆ ಮೂರು ರೈಲುಗಳ ಮಾರ್ಗ ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ರೈಲುಗಳು ಮಡಗಾಂವ್, ಕಾರವಾರ, ಪಡೀಲ್, ಸುಬ್ರಹ್ಮಣ್ಯ ರಓಡ್, ಹಾಸನ, ಅರಸೀಕೆರೆ, ಚಿಕ್ಕಜಾಜೂರು, ರಾಯದದುರ್ಗ, ಮಾರ್ಗವಾಗಿ ಸಂಚರಿಸಿವೆ. ಬಳ್ಳಾರಿಯಿಂದ ಈ ರೈಲುಗಳು ನಿಗದಿತ ಮಾರ್ಗದಲ್ಲಿ ಮುಂದುವರಿಯಲಿವೆ.
ರೈಲು ಸಂಖ್ಯೆ 12779 ವಾಸ್ಕೋಡ ಗಾಮಾ – ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಅನ್ನು ಮಡಗಾಂವ್, ರೋಹಾ, ಪನ್ವೆಲ್, ಕಲ್ಯಾಣ್ ಮತ್ತು ಪುಣೆ ಮೂಲಕ ಕಳುಹಿಸಲಾಗಿದೆ. ಮತ್ತೊಂದು ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್ – ವಾಸ್ಕೋಡ ಗಾಮಾ ಎಕ್ಸ್‌ಪ್ರೆಸ್ ಅನ್ನು ಪುಣೆ, ಕಲ್ಯಾಣ್, ಪನ್ವೆಲ್, ರೋಹಾ ಮತ್ತು ಮಡಗಾಂವ್ ಮೂಲಕ ಕಳುಹಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Poll (Public Option)

Post a comment
Log in to write reviews