ಎಸ್ಬಿ ಬ್ಯಾಂಕ್‌ನಲ್ಲಿ 13 ಕೋಟಿ ಮೌಲ್ಯದ ಚಿನ್ನ ಕಳುವು, ಬ್ಯಾಂಕ್ ತುಂಬ ಖಾರದ ಪುಡಿ
ದಾವಣಗೆರೆ : ನ್ಯಾಮತಿ ಪಟ್ಟಣದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ ಸೋಮವಾರ ಅಕ್ಟೋಬರ್.28 ರಂದು ಕಳ್ಳತನವಾಗಿದೆ. ಬ್ಯಾಂಕ್ ಲಾಕರ್ನ 509 ಬ್ಯಾಗ್ಗಳಲ್ಲಿ ಇದ್ದ 13 ಕೋಟಿ ರೂ. ಮೌಲ್ಯದ 17 ಕೆಜಿ 750 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ.
ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಬೆರಳಚ್ಚು ತಜ್ಞ ಮತ್ತು ಡಾಗ್ ಸ್ಕ್ಯ್ವಾಡ್ ತಂಡ ತಪಾಸಣೆ ನಡೆಸಿತು. ಆದರೆ ಇದುವರೆಗೂ ಒಂದು ಸುಳಿವು ಸಿಕ್ಕಿಲ್ಲ. ಬ್ಯಾಂಕ್ ಹೊರಗೆ, ಒಳಗೆ ಎಲ್ಲ ಕಡೆ ತಡಕಾಡಿದರೂ ಕಳ್ಳರ ಹೆಜ್ಜೆ ಗುರುತು ಮಾತ್ರ ಪತ್ತೆಯಾಗಿಲ್ಲ.
ಬ್ಯಾಂಕ್ ಜನ ವಸತಿ ಕಡಿಮೆ ಇರುವ ಪ್ರದೇಶದಲ್ಲಿದೆ. ಎಸ್ಬಿಐ ಬ್ಯಾಂಕ್ ಸುತ್ತ ಗಿಡಗಂಟಿಗಳು ಬೆಳೆದಿವೆ. ಕಳ್ಳರು, ಸೋಮವಾರ ರಾತ್ರಿ ಬ್ಯಾಂಕ್ನ ಕಿಟಕಿಯನ್ನು ಗ್ಯಾಸ್ ಕಟರ್ನಿಂದ ಕಟ್ ಮಾಡಿ ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಲಾಕರ್ ಅನ್ನು ಕೂಡ ಗ್ಯಾಸ್ ಕಟರ್ನಿಂದ ಕಟ್ ಮಾಡಿ ಕಳ್ಳತನ ಮಾಡಿದ್ದಾರೆ. ಬೆರಳಚ್ಚು ಗುರುತು ಸಿಗದೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡು ಕಳ್ಳತನ ಮಾಡಿದ್ದಾರೆ. ಶ್ವಾನಕ್ಕೆ ವಾಸನೆ ಗ್ರಹಿಕೆಯಾಗಬಾರದೆಂದು ಬ್ಯಾಂಕ್ ತುಂಬೆಲ್ಲ ಖಾರದ ಪುಡಿ ಹಾಕಿ ಪರಾರಿಯಾಗಿದ್ದಾರೆ. ಜೊತೆಗೆ ಬ್ಯಾಂಕ್ನ ಸಿಸಿ ಟಿವಿಯ ಡಿವಿಆರ್ ಅನ್ನು ಕೂಡ ಕಳ್ಳರು ಕದ್ದೊಯ್ದಿದ್ದಾರೆ.
ಈ ಹಿಂದೆ ಹೊನ್ನಾಳಿಯ ಅರಕೆರೆ ಗ್ರಾಮದ ಕರ್ನಾಟಕ ಬ್ಯಾಂಕ್‌ನಲ್ಲಿ ಕಳ್ಳತನ ನಡೆದಿತ್ತು. 10 ಕೋಟಿ ಮೌಲ್ಯದ ಚಿನ್ನ ಕಳುವು ಆಗಿತ್ತು. ಈಗ ನ್ಯಾಮತಿಯ ಎಸ್ಬಿಐ ಬ್ಯಾಂಕ್‌ನಲ್ಲಿ 13 ಕೋಟಿ ಮೌಲ್ಯದ ಚಿನ್ನ ಕಳುವು ಆಗಿದೆ.
ಒಟ್ಟಾರೆ ಎಸ್ಬಿಐ ಬ್ಯಾಂಕ್ ಕಳ್ಳತನ ಪ್ರಕರಣ ನಿಜಕ್ಕೂ ಅಲ್ಲಿನ ಗ್ರಾಹಕರ ನಿದ್ದೆಗೆಡಿಸಿದೆ. ನಮ್ಮ ಆಭರಣ ಮತ್ತು ದುಡ್ಡಿಗೆ ಭದ್ರತೆ ಯಾರು ಎಂಬ ಆತಂಕ ಗ್ರಾಹಕರಲ್ಲಿ ಮೂಡಿದೆ. ಆದಷ್ಟೂ ಬೇಗ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಲಿ ಎಂದು ಗ್ರಾಹಕರು ಒತ್ತಾಯಿಸುತ್ತಿದ್ದಾರೆ.
Post a comment
Log in to write reviews