
ಇಸ್ರೇಲ್: ಇರಾನ್ ನೇತೃತ್ವದಲ್ಲಿ ನಮ್ಮ ವಿರುದ್ಧ ನಡೆಯುತ್ತಿರುವ ಅನಾಗರಿಕ ಮತ್ತು ಪೈಶಾಚಿಕ ಕೃತ್ಯಗಳ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಹೀಗಾಗಿ, ಜಗತ್ತಿನ ಎಲ್ಲ ನಾಗರಿಕ ದೇಶಗಳು ನಮ್ಮ ಪರ ನಿಲ್ಲಬೇಕು ಎಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ಹೇರಬೇಕೆಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರೋನ್ ಕರೆ ನೀಡಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, "ನಿಮಗೆ ನಾಚಿಕೆಯಾಗಬೇಕು" ಎಂದು ಗುಡುಗಿದರು. ಶನಿವಾರ ವಿಡಿಯೋ ಸಂದೇಶದ ಮೂಲಕ ಮಾತನಾಡಿದ ನೆತನ್ಯಾಹು, ಉಗ್ರರು ಒಂದಾಗಿದ್ದಾರೆ. ಆದರೆ, ಈ ಉಗ್ರರ ಜಾಲವನ್ನು ಮಟ್ಟ ಹಾಕಬೇಕಿರುವ ದೇಶಗಳೇ ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ವಿಧಿಸಲು ಕರೆ ನೀಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇರಾಕ್ ಮತ್ತು ಸಿರಿಯಾದಲ್ಲಿ ಶಿಯಾ ಉಗ್ರರು ನಮ್ಮ ವಿರುದ್ಧ ಜಂಟಿಯಾಗಿ ನೂರಾರು ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ, ನಮ್ಮ ನಾಗರಿಕರನ್ನು ನಗರದ ಕೇಂದ್ರ ಭಾಗಗಳಲ್ಲೇ ಕೊಲ್ಲಲು ಹವಣಿಸುತ್ತಿರುವ ಜುಡಿಯಾ ಮತ್ತು ಸಮರಿಯಾ ಮೇಲೂ ಹೋರಾಡುತ್ತಿದ್ದೇವೆ. ಇದರ ನಡುವೆ ಈ ಎಲ್ಲ ದಾಳಿಗಳ ಹಿಂದಿನ ಕಾರಣೀಕರ್ತ ಇರಾನ್ ನಮ್ಮ ಮೇಲೆ ಇತ್ತೀಚಿಗೆ ನೇರವಾಗಿ 200ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದೆ. ಇದನ್ನು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಗಮನಿಸಬೇಕು" ಎಂದು ನೆತನ್ಯಾಹು ಹೇಳಿದ್ದಾರೆ.
ಬೆಂಬಲ ನೀಡಿ ಅಥವಾ ನೀಡದಿರಿ ನಾವು ಯುದ್ಧ ಗೆಲ್ಲುತ್ತೇವೆ: "ಹೀಗಾಗಿ, ನೀವು ನಮಗೆ ಬೆಂಬಲ ನೀಡಿ ಅಥವಾ ನೀಡದಿರಿ. ಈ ಯುದ್ಧದಲ್ಲಿ ಇಸ್ರೇಲ್ ಜಯ ಸಾಧಿಸುತ್ತದೆ. ಅಮಾನವೀಯತೆ ಮತ್ತು ಅನಾಗರಿಕತೆಯ ವಿರುದ್ಧ ಹೋರಾಡುತ್ತಾ ನಾವು ಇಡೀ ನಾಗರಿಕತೆಯನ್ನು ರಕ್ಷಿಸುತ್ತೇವೆ. ಜಾಗತಿಕ ಶಾಂತಿ ಮತ್ತು ಭದ್ರತೆಗಾಗಿ ಯುದ್ಧ ಗೆಲ್ಲುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತವೆ" ಎಂದು ಬೆಂಜಮಿನ್ ನೆತನ್ಯಾಹು ಶಪಥ ಮಾಡಿದ್ದಾರೆ.
Poll (Public Option)

Post a comment
Log in to write reviews