ಮದುವೆಯಾಗು ಇಲ್ಲದಿದ್ದರೆ ಮಸಣಕ್ಕೆ ಕಳುಹಿಸುವೆ : ಯುವತಿಗೆ ಪಾಗಲ್ ಪ್ರೇಮಿಯ ಬೆದರಿಕೆ
ಹುಬ್ಬಳ್ಳಿಯ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಕೊಲೆ ಪ್ರಕರಣಗಳು ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೊಂದು ಕೇಸ್ ಬೆಳಕಿಗೆ ಬಂದಿದೆ. ಪಾಗಲ್ ಪ್ರೇಮಿಯ ಕಾಟಕ್ಕೆ ಯುವತಿ ಮತ್ತು ಆಕೆಯ ಪೋಷಕರು ಬೇಸತ್ತು ಪೊಲೀಸರ ಮೊರೆ ಹೋಗಿದ್ದಾರೆ. ಬೆಳಗಾವಿ ತಾಲೂಕಿನ ಕಿಣೈ ಗ್ರಾಮದ ಪಾಗಲ್ ಪ್ರೇಮಿ ತಿಪ್ಪಣ್ಣ ಡೋಕರೆ (27) ಇದೇ ಗ್ರಾಮದ ಯುವತಿಗೆ ಮತ್ತು ಯುವತಿ ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾನೆ.
ಯುವತಿಗೆ ಮದುವೆ ಆಗುವಂತೆ ತಿಪ್ಪಣ್ಣ ಡೋಕರೆ ಮೂರು ವರ್ಷಗಳಿಂದ ಪೀಡಿಸುತ್ತಿದ್ದನು. ಯುವತಿ ನಿತ್ಯ ಕಾಲೇಜಿಗೆ ಹೋಗುವಾಗ ಫಾಲೋ ಮಾಡಿ ರೇಗಿಸುತ್ತಿದ್ದನು. ಇನ್ನು ಯುವತಿ ಕಿಣೈ ಗ್ರಾಮದಲ್ಲಿ ತಾಯಿಯ ಜೊತೆಗೆ ವಾಸವಾಗಿದ್ದು, ತಿಪ್ಪಣ್ಣ ಡೋಕರೆ ಕಾಟಕ್ಕೆ ಓದು ನಿಲ್ಲಿಸಿದ್ದಳು. ನಿನ್ನ ಮಗಳನ್ನು ನನಗೆ ಮದುವೆ ಮಾಡಿಕೊಡು ಎಂದು ಯುವತಿ ತಾಯಿಗೂ ಬೆದರಿಕೆ ಹಾಕಿದ್ದಾನೆ. ಮದುವೆ ಮಾಡಿಕೊಡದಿದ್ದರೆ ಇಬ್ಬರನ್ನೂ ಕೊಲೆ ಮಾಡುವುದಾಗಿ ತಿಪ್ಪಣ್ಣ ಬೆದರಿಸಿದ್ದಾನೆ. ಈ ಯುವಕ ಕೆಲಸ ಕಾಯ೯ ಮಾಡದೆ ಕುಡಿದು ಊರಲ್ಲಿ ಅಲೆದಾಡುವ ಪುಂಡ ಎಂದು ಹೇಳಲಾಗುತ್ತಿದೆ. ಅಲ್ಲದೆ ಇದೇ ವಿಚಾರಕ್ಕೆ ತಿಪ್ಪಣ್ಣ ಕೆಲ ತಿಂಗಳ ಹಿಂದೆ ಯುವತಿ ಮನೆ ಹಿಂಬಾಗಿಲಿಗೆ ಬೆಂಕಿ ಹಚ್ಚಿದ್ದ. ತಿಪ್ಪಣ್ಣನ ಕಿರಿಕಿರಿಗೆ ರೋಸಿಹೋಗಿ 3 ವರ್ಷಗಳ ಹಿಂದೆಯೇ ಯುವತಿ ಪೊಲೀಸರಿಗೆ ದೂರು ಕೊಟ್ಟಿದ್ದಳು. ಆಗ ತಿಪ್ಪಣ್ಣನ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತಿಪ್ಪಣ್ಣನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದಾದ ಕೆಲ ದಿನ ತಿಪ್ಪಣ್ಣ ಯುವತಿಯ ತಂಟೆಗೆ ಹೋಗದೆ ಸುಮ್ಮನಿದ್ದ. ಈಗ ಅವನು ಮತ್ತೆ ಹಳೆ ಚಾಳಿ ಆರಂಭಿಸಿದ್ದು, ಯುವತಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ, ಇದಕ್ಕೆ ಯುವತಿ ಮತ್ತು ಆಕೆಯ ತಾಯಿ ಬೆಳಗಾವಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ರಕ್ಷಣೆ ಕೋರಿದ್ದಾರೆ. ಆಯುಕ್ತರ ಸೂಚನೆ ಮೇರೆಗೆ ಯುವತಿ ಮನೆಗೆ ಓರ್ವ ಪೊಲೀಸ್ ಪೇದೆಯನ್ನು ನಿಯೋಜನೆ ಮಾಡಲಾಗಿದೆ.
Post a comment
Log in to write reviews