ಗಂಗಾರತಿ ಮಾದರಿಯಲ್ಲಿ ಕೆಆರ್ಎಸ್ ಜಲಾಶಯದಲ್ಲಿ ಕಾವೇರಿ ಆರತಿ: ಡಿಸಿಎಂ ಡಿಕೆ ಶಿವಕುಮಾರ್
ಮಂಡ್ಯ: ಗಂಗಾರತಿ ಮಾದರಿಯಲ್ಲಿ ಕೆಆರ್ಎಸ್ ಜಲಾಶಯದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, 25 ಜನರ ತಂಡ ಕಳುಹಿಸಿ ನಂತರ ವರದಿ ಕೊಡುತ್ತಾರೆ. ಆನಂತರ ಕಾವೇರಿ ಆರತಿ ಕಾರ್ಯಕ್ರಮ ಮಾಡುತ್ತೇವೆ . ಧಾರ್ಮಿಕ ದತ್ತಿ ಇಲಾಖೆ, ಕಾವೇರಿ ನೀರಾವರಿ ನಿಗಮ ಸೇರಿಕೊಂಡು ಕಾರ್ಯಕ್ರಮ ಮಾಡುತ್ತಾರೆ ಎಂದು ಹೇಳಿದರು.
ಈ ಭಾರಿ ವರುಣನ ಕೃಪೆ, ಚಾಮುಂಡೇಶ್ವರಿ ಅನುಗ್ರಹದಿಂದ ಕಾವೇರಿಗೆ ಬಾಗಿನ ಅರ್ಪಿಸುವ ಕಾಲ ದೊರೆತಿದೆ. ಕಳೆದ ವರ್ಷ ಕಷ್ಟದಲ್ಲಿ ಇದ್ದೆವು. ಆದರೂ ರೈತರನ್ನು ಕಾಪಾಡಿದ್ದೇವೆ. ಕಳೆದ ವರ್ಷ 200 ತಾಲೂಕುಗಳಲ್ಲಿ ಬರಗಾಲವಿತ್ತು. ಕಾವೇರಿ ಪ್ರಾಧಿಕಾರ ಆದೇಶದ ಪ್ರಕಾರ 40 ಟಿಎಂಸಿ ಬಿಡಬೇಕಿತ್ತು. ಆದರೆ 20 ಟಿಎಂಸಿ ಬಿಡಲು ಹೇಳಿತ್ತು. ಅಷ್ಟನ್ನೂ ನಾವು ಬಿಡಲಿಲ್ಲ. ಕೆಲವರು ನೀರು ಬಿಟ್ಟಿದ್ದೇವೆ ಎಂದು ವಾದ ಮಾಡಿದ್ದಾರೆ. ನಾವು ಎಲ್ಲರನ್ನು ಕರೆದು ಚರ್ಚೆ ಮಾಡಿದ್ದೇವೆ. ಆನಂತರ ನೀರು ಬಿಟ್ಟಿದ್ದೇವೆ. 30 ಟಿಎಂಸಿ ನೀರು ತಮಿಳುನಾಡಿಗೆ ತಲುಪಿಸಿದ್ದೇವೆ. ಇನ್ನು ಹತ್ತು ಟಿಎಂಸಿ ನೀರು ಬಿಡಬೇಕು. ಈ ವರ್ಷದ ಕೋಟಾ ಮುಗಿಯುತ್ತದೆ. 50 ಸಾವಿರ ಕ್ಯೂಸೆಕ್ ನೀರು ಹೋಗುತ್ತಿದೆ. ಆದೇಶವನ್ನು ಪಾಲನೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ 1657 ಕೆರೆಗಳು ಇವೆ. ಎಲ್ಲ ಕೆರೆಗಳನ್ನ ತುಂಬಿಸಲು ಕಾರ್ಯಕ್ರಮ ರೂಪಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಎರಡು ಲಕ್ಷ ಹೆಕ್ಟರ್ ಬಿತ್ತನೆ ಗುರಿ ಹೊಂದಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರದ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ 25 ಕೋಟಿ ರೂ. ಸಾಲ ನೀಡಲಾಗುತ್ತಿದೆ. ರೈತರ ಪರವಾಗಿ ನಮ್ಮ ಬದ್ಧತೆ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
Post a comment
Log in to write reviews