ಸ್ನೇಹವೇ ಬೇರೆ, ನ್ಯಾಯವೇ ಬೇರೆ ; ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು - ನಟ ಸುದೀಪ್ ಆಗ್ರಹ

ಬೆಂಗಳೂರು : ಸ್ನೇಹವೇ ಬೇರೆ, ನ್ಯಾಯವೇ ಬೇರೆ. ರೇಣುಕಾಸ್ವಾಮಿ ಕೊಲೆಯಾಗಿದೆ. ಅದನ್ನು ಯಾರು ಮಾಡಿದ್ದಾರೆ ಅನ್ನೋದನ್ನ ನ್ಯಾಯಾಲಯ ನಿರ್ಧರಿಸುತ್ತದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅನ್ನೋದನ್ನ ಮಾತ್ರ ನಾನು ಹೇಳಬಲ್ಲೇ. ಈ ವಿಷಯದಲ್ಲಿ ನ್ಯಾಯವೇ ಬೇರೆ ಸಂಬಂಧವೇ ಬೇರೆ ಎಂದು ನಟ ಕಿಚ್ಚ ಸುದೀಪ್, ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ನಟ ದರ್ಶನ್ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದಾಗ ದರ್ಶನ್ ಅವರ ಪರವಾಗಿ ಮಾತನಾಡಿದ್ರಿ. ಈಗ ಸ್ನೇಹಿತರಾಗಿ ದರ್ಶನ್ ಬಗ್ಗೆ ಏನು ಹೇಳುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಟ ಸುದೀಪ್ ಅವರು, ಈ ವಿಚಾರದಲ್ಲಿ ನಮ್ಮ ಮಧ್ಯೆ ಇರುವ ಸ್ನೇಹವೇ ಬೇರೆ, ನ್ಯಾಯವೇ ಬೇರೆ, ಸಂಬಂಧವೇ ಬೇರೆ, ನಾನು ಇವರೆಗೂ ಯಾರ ಬಗ್ಗೆಯೂ ಮಾತಾಡಿದವನಲ್ಲ. ಆದರೆ ಈಗ ಕನ್ನಡ ಚಿತ್ರರಂಗ ಅಂತ ಬಂದಿದ್ದಕ್ಕೆ ಈ ವಿಷಯದ ಬಗ್ಗೆ ಮಾತಾಡುತ್ತಿದ್ದೇನೆ. ನಾನು ಕೂಡಾ ಕನ್ನಡ ಚಿತ್ರರಂಗದ ಭಾಗವಾಗಿದ್ದೇನೆ. ಈ ಚಿತ್ರರಂಗವನ್ನು ಅನೇಕ ಕಲಾವಿದರು ಸಾಕಷ್ಟು ಶ್ರಮಪಟ್ಟು ಕಟ್ಟಿದ್ದಾರೆ. ಅದನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸದ್ಯ ಕೇಳಿ ಬಂದಿರುವ ಆರೋಪ ಅತ್ಯಂತ ಗಂಭೀರವಾದದು. ಇಲ್ಲಿ ಕೂತು ನಾವು ಜಡ್ಜ್ ಮಾಡಬಾರದು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ನಟ ಸುದೀಪ್ ಹೇಳಿದ್ದಾರೆ.
ಇನ್ನು ನನ್ನ ಕಣ್ಣ ಮುಂದೆ ರೇಣುಕಾಸ್ವಾಮಿ ಕುಟುಂಬವೇ ಬರುತ್ತೆ. ಅವರ ನೋವು ಯಾರಿಗೂ ಬೇಡ. ಈ ಪ್ರಕರಣದಲ್ಲಿ ನ್ಯಾಯ ಅನ್ನೋದು ತುಂಬಾನೇ ಮುಖ್ಯ. ನ್ಯಾಯದ ಬಗ್ಗೆ ಸಾಮಾನ್ಯ ಜನರಿಗೆ ನಂಬಿಕೆ ಬರಬೇಕೆಂದರೆ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ನಟ ಸುದೀಪ್ ಮನವಿ ಮಾಡಿದ್ದಾರೆ.
Poll (Public Option)

Post a comment
Log in to write reviews