
ವಿಂಡರ್: ಜಾರ್ಜಿಯಾ ದೇಶದ ಹೈಸ್ಕೂಲ್ನಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿಯಿಂದ ನಾಲ್ವರನ್ನು ಹತ್ಯೆಗೈದ ಘಟನೆ ಬುಧವಾರ ನಡೆದಿದ್ದು, ಈ ದಾಳಿಯಲ್ಲಿ 8 ವಿದ್ಯಾರ್ಥಿಗಳು ಗಾಯಗೊಂಡು ಮತ್ತು ಓರ್ವ ಶಿಕ್ಷಕ ಸೇರಿ 19 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಟ್ಲಾಂಟಾ ಹತ್ತಿರದ ವಿಂಡರ್ ನಗರದ ಅಪಾಲಾಚಿ ಹೈಸ್ಕೂಲ್ನಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಗುಂಡಿನ ದಾಳಿ ವೇಳೆ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ರಕ್ಷಿಸಿಕೊಳ್ಳಲು ತರಗತಿ ಕೊಠಡಿಗಳಲ್ಲಿ ಓಡಾಡಿದ್ದಾರೆ. ಬಳಿಕ ವಿದ್ಯಾರ್ಥಿಗಳನ್ನು ಹತ್ತಿರ ಫುಟ್ಬಾಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದ್ದು, ಇನ್ನು ಘಟನೆ ಬೆನ್ನಲ್ಲೇ ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸ್ಥಳಕ್ಕೆ ದೌಡಾಯಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿ ಮಾಡಿದ ವಿದ್ಯಾರ್ಥಿಯನ್ನು ತಕ್ಷಣವೇ ಶಾಲೆಯ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಂಕಿತ ವಿದ್ಯಾರ್ಥಿ ಗುಂಡಿನ ದಾಳಿಯಲ್ಲಿ ಬಳಸಿದ ಬಂದೂಕನ್ನು ಹೇಗೆ ಪಡೆದುಕೊಂಡನು ಮತ್ತು ಶಾಲೆಗೆ ಹೇಗೆ ಒಳ ನುಗ್ಗಿದ್ದಾನೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ದಾಳಿಗೆ ವಿದ್ಯಾರ್ಥಿ ಯಾವ ಬಂದೂಕು ಬಳಸಿದ್ದಾನೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
"ನನ್ನ ಹೃದಯವು ಈ ಮಕ್ಕಳಿಗಾಗಿ ಮಿಡಿಯುತ್ತದೆ. ನನ್ನ ಹೃದಯವು ನಮ್ಮ ಸಮುದಾಯಕ್ಕಾಗಿ ಮಿಡಿಯುತ್ತದೆ. ಆದರೆ ದ್ವೇಷವು ಮೇಲುಗೈ ಸಾಧಿಸುವುದಿಲ್ಲ, ಪ್ರೀತಿ ಮೇಲುಗೈ ಸಾಧಿಸುತ್ತದೆ ಎಂದು ನಾನು ಸ್ಪಷ್ಟವಾಗಿ ಇಲ್ಲಿ ಹೇಳಲು ಬಯಸುತ್ತೇನೆ" ಎಂದು ಈ ಘಟನೆ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡುವಾಗ ಬಾರೋ ಕೌಂಟಿ ಶೆರಿಫ್ ಜಡ್ ಸ್ಮಿತ್ ಕಣ್ಣೀರು ಹಾಕಿದರು.
"ಶಾಲಾ ಆವರಣದಲ್ಲಿ ಗುಂಡಿನ ಶಬ್ದ ಕೇಳಿದಾಗ ನಾನು ತರಗತಿಯಲ್ಲಿದ್ದೆ. ತಕ್ಷಣವೇ ಕೊಠಡಿಯ ಬಾಗಿಲುಗಳಿಗೆ ಡೆಸ್ಕ್ ಇಟ್ಟು ರಕ್ಷಿಸಿಕೊಳ್ಳಲು ಪ್ರಯತ್ನಿಸಿದೆವು. ತರಗತಿಯಲ್ಲಿದ್ದ ನನ್ನ ಎಲ್ಲ ಸಹಪಾಠಿಗಳು ಭಯಭೀತರಾಗಿದ್ದು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ರಕ್ಷಣೆಗಾಗಿ ಪೊಲೀಸರಿಗಾಗಿ ಕಾಯುತ್ತಿದ್ದೆವು" ಎಂದು ವಿದ್ಯಾರ್ಥಿಯೊಬ್ಬರು ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
Poll (Public Option)

Post a comment
Log in to write reviews