ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕೇಸ್‌ನಲ್ಲಿ ಬಂಧಿತರಾಗಿರುವ ಮಾಜಿ ಸಚಿವ ನಾಗೇಂದ್ರ ಜಾಮೀನು ಅರ್ಜಿಯ ತೀರ್ಪು ಇಂದು 12 ಗಂಟೆ ಸುಮಾರಿಗೆ ಪ್ರಕಟವಾಗಲಿದೆ.
ಈಗಾಗಲೇ ನಾಗೇಂದ್ರ ವಿರುದ್ಧ ಇಡಿ ಅಧಿಕಾರಿಗಳು ಪ್ರಾಸಿಕ್ಯೂಷನ್‌ಗೆ ಅನುಮತಿ ಪಡೆದಿದ್ದಾರೆ. ಸದ್ಯ ಸೆಂಟ್ರಲ್ ಜೈಲನಲ್ಲಿರೋ ಮಾಜಿ ಸಚಿವರಿಗೆ ಬೇಲ್ ಸಿಕ್ಕಿದರಷ್ಟೇ ಪರಪ್ಪನ ಅಗ್ರಹಾರದಿಂದ ರಿಲೀಸ್ ಆಗಲಿದ್ದಾರೆ.
ಹಗರಣದ ಮಾಸ್ಟರ್‌ಮೈಂಡ್ ನಾಗೇಂದ್ರ:
ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಇಡಿ ಬೆಂಗಳೂರಿನ ಜನಪ್ರತಿನಿಗಳ ವಿಶೇಷ ನ್ಯಾಯಾಲಯಕ್ಕೆ 24 ಮಂದಿ ಆರೋಪಿಗಳ ವಿರುದ್ಧ ಆರೋಪ ಪಟ್ಟಿಯನ್ನು ಇದೇ ಅಕ್ಟೋಬರ್ 5ರಂದು ಸಲ್ಲಿಸಿತ್ತು. ಪ್ರಕರಣದಲ್ಲಿ ನಾಗೇಂದ್ರ ಮಾಸ್ಟರ್ ಮೈಂಡ್ ಎಂದು ಇಡಿ ಉಲ್ಲೇಖಿಸಿದೆ. ಸತ್ಯನಾರಾಯಣ ವರ್ಮಾ, ಪದ್ಮನಾಭ, ನಾಗೇಶ್‌ರಾವ್, ನೆಕ್ಕಂಟಿ ನಾಗರಾಜ್, ವಿಜಯ್‌ಕುಮಾರ್ ಸೇರಿ 24 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಮೇ 2024 ರಲ್ಲಿ ನಿಗಮದ ಉದ್ಯೋಗಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ನಂತರ ಈ ಬಹುಕೋಟಿ ಹಗರಣ ಬೆಳಕಿಗೆ ಬಂದಿತ್ತು.
ಬಿ.ನಾಗೇಂದ್ರ ಅವರು 187 ಕೋಟಿ ರೂ. ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯ ಖಜಾನೆಯಿಂದ 43.33 ಕೋಟಿ ರೂ.ಗಳನ್ನು ಯಾವುದೇ ಸೂಕ್ತ ಅನುಮತಿಯಿಲ್ಲದೆ ಬೆಂಗಳೂರಿನ ಎಂಜಿ ರಸ್ತೆ ಶಾಖೆಗೆ ವರ್ಗಾಯಿಸಿದ್ದಾರೆ. ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸದೇ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಠೇವಣಿ ಮಾಡಲಾಗಿದೆ.
ತನಿಖೆಯ ವೇಳೆ 20.19 ಕೋಟಿ ರೂ. ಹಣವನ್ನು ಬಳ್ಳಾರಿ ಕ್ಷೇತ್ರದಿಂದ 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಯ ಪ್ರಚಾರಕ್ಕೆ ದುರ್ಬಳಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ನಾಗೇಂದ್ರ ಅವರ ವೈಯಕ್ತಿಕ ಖರ್ಚಿಗೆ ಬಳಸಲಾಗಿದೆ.
ನಾಗೇಂದ್ರ ಅವರ ಸೂಚನೆ ಮೇರೆಗೆ ನಗದನ್ನು ನಿರ್ವಹಿಸುತ್ತಿದ್ದ ವಿಜಯ್ ಕುಮಾರ್ ಗೌಡ ಅವರ ಮೊಬೈಲ್ ಫೋನ್‌ನಿಂದ ಚುನಾವಣಾ ವೆಚ್ಚದ ವಿವರಗಳನ್ನು ಪಡೆಯಲಾಗಿದೆ. ಹಗರಣ ಬೆಳಕಿಗೆ ಬಂದ ನಂತರ ರಾಜೀನಾಮೆ ನೀಡಿದ ಬಿ.ನಾಗೇಂದ್ರ ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ನಾಶಪಡಿಸಿದ್ದಾರೆ. ಅಷ್ಟೇ ಅಲ್ಲದೇ ಉಳಿದವರಿಗೆ ಈ ಪ್ರಕರಣದಲ್ಲಿ ಮೌನವಾಗಿರುವಂತೆ ಸೂಚನೆ ನೀಡಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇಡಿ ತಿಳಿಸಿದೆ.
Post a comment
Log in to write reviews