
ಬೆಂಗಳೂರು: ಕರ್ನಾಟಕದಲ್ಲಿರುವ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ (Karnataka Jobs Reservation) ಹುದ್ದೆಗಳಲ್ಲಿ ಶೇ.75 ಮೀಸಲಾತಿ ನಿಗದಿಪಡಿಸುವ ಕರಡು ಮಸೂದೆಗೆ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಆರ್ಸಿಬಿ(RCB Reservation) ತಂಡದಲ್ಲಿಯೂ ಕೂಡ ಮೀಸಲಾತಿ ನೀಡಬೇಕು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪ್ರತಿ ಬಾರಿಯೂ ಕರ್ನಾಟಕ ಆಟಗಾರರಿಗೆ ಅವಕಾಶ ನೀಡುವುದಿಲ್ಲ. ಒಂದೆಡರು ಮಂದಿಯನ್ನು ಮಾತ್ರ ಹರಾಜಿನಲ್ಲಿ ಖರೀದಿ ಮಾಡಿದರೂ ಕೂಡ ಅವರಿಗೆ ಆಡುವ ಅವಕಾಶ ನೀಡದೆ ಕೇವಲ ಬೆಂಚ್ನಲ್ಲಿ ಕೂರಿಸಿಡುತ್ತಾರೆ. ಪ್ರತಿ ಬಾರಿ ಹರಾಜು ನಡೆದಾಗಲೂ ಆರ್ಸಿಬಿ ಅಭಿಮಾನಿಗಳು ಕನ್ನಡಿಗ ಆಟಗಾರರ ಕಡೆಗಣನೆಯ ಬಗ್ಗೆ ಫ್ರಾಂಚೈಸಿ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಇರುತ್ತಾರೆ. ಇದೀಗ ಕರ್ನಾಟಕದಲ್ಲಿ ಖಾಸಗಿ ಕೈಗಾರಿಕೆಗಳಲ್ಲಿ ಸರ್ಕಾರ ಮೀಸಲಾತಿ ಜಾರಿಗೆ ತರುವ ಚಿಂತನೆ ನಡೆಸಿದ ಬೆನ್ನಲ್ಲೇ ಐಪಿಎಲ್ನಲ್ಲಿ ಆರ್ಸಿಬಿ ತಂಡದಲ್ಲಿಯೂ ಶೇ 50ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದಾರೆ.
ಆರ್ಸಿಬಿಯ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೀಸಲಾತಿ ಜಾರಿ ಮಾಡುವಂತೆ ಹಲವು ಟ್ವೀಟ್ ಮಾಡಲಾರಂಭಿಸಿದ್ದಾರೆ. ಐಪಿಎಲ್ ಆರಂಭವಾಗಿ 17 ಆವೃತ್ತಿ ಕಳೆದರೂ ಕೂಡ ಇದುವರೆಗೂ ಆರ್ಸಿಬಿ ಕಪ್ ಗೆದ್ದಿಲ್ಲ. ನಮ್ಮ ರಾಜ್ಯದಲ್ಲಿ ಅದೆಷ್ಟೋ ಸ್ಟಾರ್ ಆಟಗಾರರಿದ್ದರೂ ಕೂಡ ಅವರನ್ನು ಆರ್ಸಿಬಿ ಖರೀದಿ ಮಾಡದೆ ಸರಿಯಾಗಿ ಆಡಲು ಬಾರದ ಆಟಗಾರರಿಗೆ ಅತ್ಯಧಿಕ ಮೊತ್ತದ ಬಿಡ್ ಮಾಡಿ ತಂಡ ಸೇರಿಸಿಕೊಳ್ಳುತ್ತಿದೆ. ಈ ಬಾರಿಯ ಮೆಗಾ ಹರಾಜಿನಲ್ಲಾದರು ಕನ್ನಡಿಗ ಆಟಗಾರರಿಗೆ ಅವಕಾಶ ನೀಡಲಿದೆಯಾ ಎಂದು ಕಾದು ನೋಡಬೇಕಿದೆ.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯ ಕರಡು ಮಸೂದೆ ಜಾರಿಗೆ ತರುವುದಾಗಿ ಘೋಷಿಸಿದ ತಕ್ಷಣವೇ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಗೊಂಡಿತ್ತು. ಪ್ರಮುಖ ಉದ್ಯಮಿಗಳಾದ ಮೋಹನ್ ದಾಸ್ ಪೈ,ಕಿರಣ್ ಮಜುಂದಾರ್ ಅವರು ಈ ಬಗ್ಗೆ ಆಕ್ಷೇಪ ಎತ್ತಿದ್ದರು. ನೆರೆ ರಾಜ್ಯದ ಸರ್ಕಾರಗಳೂ ಇದರ ಬಗ್ಗೆ ತಕರಾರು ಎತ್ತಿದ್ದವು. ಈ ಒತ್ತಡಕ್ಕೆ ಬಗ್ಗಿರುವ ಸರ್ಕಾರ ಮಸೂದಗೆ ತಾತ್ಕಾಲಿಕ ತಡೆಯನ್ನು ನೀಡಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
Poll (Public Option)

Post a comment
Log in to write reviews