ಬೆಂಗಳೂರು: ದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ ಸರ್ಕಾರದ ವಿವಿಧ ಉನ್ನತ ಅಧಿಕಾರಿಗಳು ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಭೆ ಮತ್ತು ವಿಡಿಯೋ ಸಂವಾದಗಳನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಅಲ್ಲದೆ ತುರ್ತು ವಿಚಾರಗಳನ್ನು ಹೊರತುಪಡಿಸಿ ಇನ್ನುಳಿದ ವಿಚಾರಗಳ ಕುರಿತು ಸಭೆ ಮತ್ತು ವಿಡಿಯೋ ಸಂವಾದಗಳನ್ನು ನಡೆಸಬಾರದು ಎಂದು ತಾಕೀತು ಮಾಡಿದ್ದಾರೆ.
ಈ ಕುರಿತು ಮನೋಜ್ ಕುಮಾರ್ ಮೀನಾ ಮೇ 27 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ ಲೋಕಸಭಾ ಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆ ಸಂಬಂಧ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಿರುವಾಗ ಕೆಲವೊಂದು ಇಲಾಖೆಯ ಕಾರ್ಯದರ್ಶಿಗಳು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಇತರೆ ಉನ್ನತ ಅಧಿಕಾರಿಗಳು ಸಭೆ ಮತ್ತು ವಿಡಿಯೋ ಸಂವಾದ ನಡೆಸಿದ್ದಾರೆ. ಇದರ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಮಾಹಿತಿ ಲಭ್ಯವಾಗಿದೆ. ಇದರಿಂದ ಚುನಾವಣಾ ಕಾರ್ಯ ನಿರ್ವಹಣೆಗೆ ಅಡಚಣೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಇಂತಹ ಸಭೆ ಮತ್ತು ವಿಡಿಯೋ ಸಂವಾದಗಳನ್ನು ಈ ಕೂಡಲೇ ಸ್ಥಗಿತಗೊಳಿಸಬೇಕು. ಈಗಾಗಲೇ ಸಭೆಗಳು ನಿಗದಿಯಾಗಿದ್ದರೆ, ಅವುಗಳನ್ನು ಮುಂದೂಡಬೇಕು. ಒಂದು ವೇಳೆ ತರ್ತು ಅಗತ್ಯವಿದ್ದರೆ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅನುಮತಿ ಪಡೆದುಕೊಂಡು ಸಭೆ ಮತ್ತು ವಿಡಿಯೋ ಸಂವಾದ ನಡೆಸಬೇಕು ಎಂದು ಸೂಚಿಸಿದ್ದಾರೆ.
Post a comment
Log in to write reviews