ದಸರಾ, ದೀಪಾವಳಿ: ಸಿಹಿತಿಂಡಿಗಳು ಸುರಕ್ಷಿತವಾ? ಸ್ವೀಟ್ಸ್‌ಗಳ ಟೆಸ್ಟ್‌ಗೆ ಮುಂದಾದ ಆಹಾರ ಇಲಾಖೆ
ಬೆಂಗಳೂರು :ಆಹಾರ ಇಲಾಖೆಯಿಂದ ಈಗಾಗಲೇ ರಾಜ್ಯದಾದ್ಯಂತ ಆಹಾರ ವಸ್ತುಗಳ ಗಣಮಟ್ಟದ ಪರೀಕ್ಷೆ ಮಾಡಿ ಅನೇಕ ಫುಡ್‌ಗಳಲ್ಲಿ ಕಲಬೆರಕೆ ಪತ್ತೆಯಾಗಿದ್ದರಿಂದ ಅವುಗಳ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಇದೀಗ ಸಿಹಿ ತಿಂಡಿಗಳ ಸರದಿ. ಯಾಕೆಂದರೆ, ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನ ಹೆಚ್ಚು ಸ್ವೀಟ್ಸ್‌ಗಳನ್ನು ಖರೀದಿ ಮಾಡುತ್ತಾರೆ. ಆದರೆ ಅನೇಕ ಸ್ವೀಟ್ಸ್‌ಗಳಲ್ಲಿ ಕಲರ್ ಬಳಕೆ ಹಾಗೂ ಅದಕ್ಕೆ ಸೇರಿಸುವ ಪದಾರ್ಥಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ. ಹೀಗಾಗಿ ಆಹಾರ ಸುರಕ್ಷತಾ ಇಲಾಖೆ ಎಲ್ಲಾ ಬ್ರಾಂಡ್‌ಗಳ ಸ್ವೀಟ್ಸ್‌ಗಳನ್ನ ಪರೀಕ್ಷೆ ಮಾಡಲು ಮುಂದಾಗಿದೆ. ಇದರಿಂದಾಗಿ ಸಿಹಿಯಾಗಿ, ರುಚಿಯಾಗಿ ಸಿಗುವ ಸ್ವೀಟ್ಸ್‌ಗಳಲ್ಲಿ ಆರೋಗ್ಯಕ್ಕೆ ಕಹಿ ಎನಿಸುವ ಅಂಶಗಳಿದೆಯಾ ಎಂಬುದು ತಿಳಿಯಲಿದೆ.
ಇದರ ಜೊತೆಗೆ ಬೇಕರಿ ತಿಂಡಿಗಳ ಮೇಲೂ ಇಲಾಖೆ ನಿಗಾವಹಿಸಲು ಮುಂದಾಗಿದೆ. ಕಳಪೆ ಮತ್ತು ಕಲಬೆರಕೆ ತುಪ್ಪದಿಂದ ತಯಾರಾಗುವ ಸಿಹಿಯ ಮೇಲೂ ನಿರ್ಬಂಧ ಹೇರಲು ಸಿದ್ಧತೆ ಮಾಡಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಮತ್ತು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಆಹಾರ ಇಲಾಖೆ ಜನರ ಆರೋಗ್ಯದ ದೃಷ್ಟಿಯಿಂದ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸದ್ಯ ಸ್ವೀಟ್ಸ್‌ಗಳ ಟೆಸ್ಟ್ ಮಾಡಲು ಮುಂದಾಗಿದ್ದು, ವರದಿಗಾಗಿ ಅಧಿಕಾರಿಗಳು ಕಾಯಲಿದ್ದಾರೆ. ವರದಿ ಕೈ ಸೇರಿದ ಬಳಿಕ ಇದು ಸುರಕ್ಷಿತವಾ ಅಥವಾ ಅಲ್ಲವೇ ಎಂಬುದು ತಿಳಿಯಲಿದ್ದು, ನಂತರ ಇಲಾಖೆ ಕ್ರಮ ಕೈಗೊಳ್ಳಲಿದೆ.
ರಾಜ್ಯದಲ್ಲಿ ಈಗಾಗಲೇ ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ ಮತ್ತು ರಾಸಾಯನಿಕ ಬೆರೆಸುವುದನ್ನು ನಿಷೇಧಿಸಲಾಗಿದೆ. ಕೃತಕ ಬಣ್ಣ ಹಾಕಿದ ಬಾಂಬೆ ಮಿಠಾಯಿಯನ್ನು ಕೂಡ ನಿಷೇಧಿಸಲಾಗಿದೆ. ರಾಜ್ಯದ ಹೋಟೆಲ್ಗಳಲ್ಲಿ ನೀಡುವ ಆಹಾರದ ಗುಣಮಟ್ಟಗಳ ಪರೀಕ್ಷೆಯನ್ನು ಕೂಡ ಆಹಾರ ಇಲಾಖೆ ನಡೆಸುತ್ತಿದೆ.
Post a comment
Log in to write reviews