ಹಿಂದಿನ ವರ್ಷದಲ್ಲಿ ಮಳೆ ಕಡಿಮೆ ಆಗಿರುವ ಪರಿಣಾಮ ಮಲಪ್ರಭಾ ನದಿ ನೀರಿಲ್ಲದೇ ಸಂಪೂರ್ಣ ಬತ್ತಿ ಹೋಗಿದ್ದು, ಪ್ರಾಣಿಗಳು, ಪಕ್ಷಿಗಳು ಹಾಗೂ ಮನುಕುಲವೇ ಹನಿ ನೀರಿಗಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಹೌದು ಕಿತ್ತೂರು ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ. ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಬಳಿ ಮಲಪ್ರಭಾ ನದಿ ಖಾಲಿಯಾಗಿ ಜೀವ ಕುಲಕ್ಕೆ ಸಂಕಷ್ಟ ಎದುರಾಗಿದೆ. ಮಲಪ್ರಭಾ ನದಿಯ ಒಡಲು ಹನಿ ನೀರಿಲ್ಲದೇ ಒಣಗಿದ ಪರಿಣಾಮ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಅಲ್ಲದೇ ಈ ನದಿ ನೀರನ್ನೇ ನಂಬಿ ಕಬ್ಬು ಸೇರಿ ಮತ್ತಿತರ ಬೆಳೆ ಬೆಳೆದಿದ್ದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಗಂಗಾಬಿಕಾದೇವಿ ಪೂಜೆಗೂ ನೀರಿಲ್ಲ: ನೀರಿನ ಹಾಹಾಕಾರ ಜನರಿಗೆ ಅಷ್ಟೇ ಅಲ್ಲ ದೇವರಿಗೂ ಕೂಡ ನೀರಿನ ಬರ ಬಂದಿದೆ. ನದಿಯಲ್ಲೇ ದೇವಸ್ಥಾನವಿದ್ದರೂ ದೇವರ ಪೂಜೆಗೂ ನೀರಿಲ್ಲ. ನದಿಯಲ್ಲಿಯೇ ವಿಶ್ವಗುರು ಬಸವಣ್ಣನವರ ಧರ್ಮಪತ್ನಿ ಗಂಗಾಬಿಕಾದೇವಿ ದೇವಸ್ಥಾನವಿದೆ. ದೇವಿ ಪೂಜೆಗೂ ನೀರಿಲ್ಲದ ಸ್ಥಿತಿಯಿದೆ. ಇನ್ನು ಖಾಲಿಯಾದ ನದಿಯಲ್ಲಿ ಎಲ್ಲಿ ನೋಡಿದರೂ ದೇವರ ಮೂರ್ತಿಗಳು ಕಾಣಿಸಿಗುತ್ತಿವೆ. ಅಲ್ಲದೇ ಮಲಪ್ರಭೆ ಒಡಲು ಗಣೇಶನ ವಿಗೃಹಗಳು ಹಾಗೂ ಇನ್ನಿತರ ದೇವರ ಫೋಟೋಗಳಿಂದಲೇ ತುಂಬಿದೆ.
ಮಾಡಿದ್ದುಣ್ಣೋ ಮಾರಾಯ ಎನ್ನುವಂತೆ ಪ್ರಕೃತಿ ಮುನಿಸಿಗೆ ನಾವೇ ಕಾರಣವಾಗಿದ್ದು, ಪ್ರಕೃತಿ ಹಾಗೂ ಗಿಡಮರಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಮರೆತು ಬಿಟ್ಟಿದ್ದೇವೆ. ಇನ್ಮುಂದೆಯಾದರೂ ಅರಣ್ಯ ಸಂಪತ್ತು ಉಳಿಸಿ, ಬೆಳೆಸಿದರೆ ಮಾತ್ರ ಜೀವಕುಲಕ್ಕೆ ಉಳಿಗಾಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ.
Post a comment
Log in to write reviews