
DPL: ಡೆಲ್ಲಿ ಪ್ರೀಮಿಯರ್ ಲೀಗ್ಗೆ ತೆರೆಬಿದ್ದಿದೆ. ಪುರುಷರ ಫೈನಲ್ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದರೆ, ಮಹಿಳಾ ಡಿಪಿಎಲ್ನಲ್ಲಿ ನಾರ್ಥ್ ಡೆಲ್ಲಿ ಸ್ಟ್ರೈಕರ್ಸ್ ತಂಡವು ಚೊಚ್ಚಲ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಆದರೆ ಈ ಎರಡು ಫೈನಲ್ಗಳಲ್ಲೂ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡ ಸೋಲನುಭವಿಸಿ ನಿರಾಸೆ ಅನುಭವಿಸಿದೆ.
ಡೆಲ್ಲಿ ಪ್ರೀಮಿಯರ ಲೀಗ್ನ ಫೈನಲ್ ಪಂದ್ಯದಲ್ಲಿ 3 ರನ್ಗಳ ರೋಚಕ ಜಯ ಸಾಧಿಸಿ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ಹಾಗೂ ಈಸ್ಟ್ ಡೆಲ್ಲಿ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಈಸ್ಟ್ ಡೆಲ್ಲಿ ರೈಡರ್ಸ್ ತಂಡದ ನಾಯಕ ಹಿಮ್ಮತ್ ಸಿಂಗ್ ಬ್ಯಾಟಿಂಗ್ ಆಯ್ದುಕೊಂಡರು. ಇದಾಗ್ಯೂ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ಅನೂಜ್ ರಾವತ್ ಕೇವಲ 10 ರನ್ಗಳಿಸಿ ಔಟಾದರೆ, ಸುಜಲ್ ಸಿಂಗ್ 5 ರನ್ಗೆ ಇನಿಂಗ್ಸ್ ಅಂತ್ಯಗೊಳಿಸಿದರು. ಆ ಬಳಿಕ ಬಂದ ನಾಯಕ ಹಿಮ್ಮತ್ ಸಿಂಗ್ ಕಲೆಹಾಕಿದ್ದು ಕೇವಲ 20 ರನ್ಗಳು ಮಾತ್ರ. ಆದರೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಯಾಂಕ್ ರಾವತ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು.
39 ಎಸೆತಗಳನ್ನು ಎದುರಿಸಿದ ಮಯಾಂಕ್ ರಾವತ್ 6 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 78 ರನ್ ಚಚ್ಚಿದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು.
ಈ ಸವಾಲಿನ ಗುರಿ ಬೆನ್ನತ್ತಿದ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಓಪನರ್ಗಳಾದ ಕನ್ವರ್ ಭಿಧೂರಿ (22) ಹಾಗೂ ಪ್ರಿಯಾಂಶ್ ಆರ್ಯ (6) ಬೇಗನೆ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಆಯುಷ್ ಬದೋನಿ 7 ರನ್ಗಳಿಸಿ ಔಟಾದರು.
ಈ ಹಂತದಲ್ಲಿ ಕ್ರೀಸ್ಗೆ ಆಗಮಿಸಿದ ಸುಮಿತ್ ಮಾಥುರ್ 42 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 68 ರನ್ ಚಚ್ಚಿದರು. ಈ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇದಾಗ್ಯೂ ಅಂತಿಮ 5 ಓವರ್ಗಳಲ್ಲಿ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡಕ್ಕೆ 66 ರನ್ಗಳ ಅವಶ್ಯಕತೆಯಿತ್ತು.
ಕೊನೆಯ ಓವರ್ಗಳ ವೇಳೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ತೆಜಸ್ವಿ ದಹಿಯಾ ಸೌತ್ ಡೆಲ್ಲಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಕೇವಲ 39 ಎಸೆತಗಳನ್ನು ಎದುರಿಸಿದ ದಹಿಯಾ 69 ರನ್ ಬಾರಿಸಿ 19ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಪರಿಣಾಮ ಕೊನೆಯ ಓವರ್ನಲ್ಲಿ 19 ರನ್ಗಳು ಬೇಕಿತ್ತು.
ರೋನಕ್ ವಘೆಲಾ ಅವರ ಅಂತಿಮ ಓವರ್ನಲ್ಲಿ ದಿಘ್ವೇಶ್ ಠಾಠಿ ಒಂದು ಸಿಕ್ಸ್ ಹಾಗೂ 2 ಫೋರ್ಗಳನ್ನು ಬಾರಿಸಿದರೂ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ. ಅದರಲ್ಲೂ ಕೊನೆಯ ಎರಡು ಎಸೆತಗಳಲ್ಲಿ 4 ರನ್ಗಳಿಸಲು ದಿಘ್ವೇಶ್ ವಿಫಲರಾದರು. ಈ ಮೂಲಕ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು 3 ರನ್ಗಳ ರೋಚಕ ಜಯ ಸಾಧಿಸಿ ಚೊಚ್ಚಲ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Poll (Public Option)

Post a comment
Log in to write reviews