ಡಬಲ್ ಇಸ್ಮಾರ್ಟ್ ಟ್ರೇಲರ್ ಬಿಡುಗಡೆ: ಬಾಲಿವುಡ್ ಸಂಜು ಬಾಬಾಗೆ ತೊಡೆ ತಟ್ಟಿದ ರಾಮ್ ಪೋತಿನೇನಿ

ಡಬಲ್ ಇಸ್ಮಾರ್ಟ್ ಸಿನಿಮಾ ಟ್ರೇಲರ್ ಭಾನುವಾರ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.
ಹೈದರಾಬಾದ್: ಟಾಲಿವುಡ್ನ ಬಹುನಿರೀಕ್ಷಿತ ಹೈ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ 'ಡಬಲ್ ಇಸ್ಮಾರ್ಟ್'. ಟೀಸರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಭರಪೂರ ಆ್ಯಕ್ಷನ್, ಲವ್, ಮದರ್ ಸೆಂಟಿಮೆಂಟ್ ಟ್ರೇಲರ್ನಲ್ಲಿದೆ. 2 ನಿಮಿಷ 43 ಸೆಕೆಂಡ್ ಇರುವ ಚಿತ್ರದ ನಾಯಕ ನಟ ರಾಮ್ ಪೋತಿನೇನಿ ಅಬ್ಬರಿಸಿದ್ದಾರೆ. ರಾಮ್ ಎದುರು ಖಡಕ್ ಖಳನಾಯಕನಾಗಿ ಬಾಲಿವುಡ್ನ ಸಂಜಯ್ ದತ್ ಬಿಗ್ಬುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಜುಗಲ್ಬಂಧಿಯಲ್ಲಿ ಟ್ರೇಲರ್ನ ಹೈಲೆಟ್ಸ್.
ಪವರ್ ಪ್ಯಾಕ್ಡ್ ಡಬಲ್ ಇಸ್ಮಾರ್ಟ್ ಸಿನಿಮಾದಲ್ಲಿ ನಾಯಕಿ ಕಾವ್ಯಾ ಥಾಪರ್ ಸಖತ್ ಗ್ಲಾಮರ್ ಅವತಾರದಲ್ಲಿ ನಟಿಸಿದ್ದಾರೆ. ಹಾಸ್ಯ ನಟ ಅಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರ ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ವಿಶೇಷ ಎಂದರೆ, ಇದು 2019ರಲ್ಲಿ ಬಿಡುಗಡೆಯಾದ ಇಸ್ಮಾರ್ಟ್ ಶಂಕರ್ ಚಿತ್ರದ ಸೀಕ್ವೆಲ್. ಮೊದಲ ಭಾಗದಲ್ಲಿ ರಾಮ್ ರಾಮ್ ಪೋತಿನೇನಿ ಜತೆಗೆ ಕನ್ನಡತಿ ನಭಾ ನಟೇಶ್ ಮತ್ತು ಬೆಂಗಳೂರು ಮೂಲದ ನಿಧಿ ಅಗರ್‌ವಾಲ್ ಅಭಿನಯಿಸಿದ್ದರು. ಆಗ, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಆಗಿ ಡಬಲ್ ಇಸ್ಮಾರ್ಟ್ ಸಿನಿಮಾ ಬರುತ್ತಿದೆ. ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ರಾಮ್ ಪೋತಿನೇನಿ, ಕಾವ್ಯಾ ಥಾಪರ್, ಸಂಜಯ್ ದತ್ ಜೊತೆಗೆ ಸಯ್ಯಾಜಿ ಶಿಂಧೆ, ಅಲಿ, ಮಕರಂದ ದೇಶ್‌ಪಾಂಡೆಯಂತಹ ನಟರು ಪಾತ್ರ ಪೋಷಿಸಿದ್ದು, ಸಿನಿಮಾಕ್ಕೆ ಮತ್ತಷ್ಟು ರಂಗು ನೀಡಿದೆ. ಮಣಿಶರ್ಮಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಸ್ಯಾಮ್ ಕೆ.ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಛಾಯಾಗ್ರಹಣ ಈ ಸಿನಿಮಾಕ್ಕಿದೆ.
ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ನಿರ್ಮಾಪಕಿ ಚಾರ್ಮಿ ಕೌರ್ ನಿರ್ಮಿಸಿದ್ದಾರೆ. ಸದ್ಯ ಟ್ರೈಲರ್ನಿಂದ ಸದ್ದು ಮಾಡುತ್ತಿರುವ ಈ ಚಿತ್ರ ಆಗಸ್ಟ್ 15ರಂದು ಚಿತ್ರ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.
Poll (Public Option)

Post a comment
Log in to write reviews