ಬೆಂಗಳೂರು : ರೇಸ್ ಕೋರ್ಸ್ ನಲ್ಲಿ ಷರತ್ತುಗಳ ಅನ್ವಯ ಕುದುರೆ ಪಂದ್ಯಗಳನ್ನು ಆಯೋಜನೆ ಮಾಡಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.
ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಏಕಸದಸ್ಯ ಪೀಠ, ಮುಂದಿನ ಆದೇಶದವರೆಗೂ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರೇಸಿಂಗ್, ಬೆಟ್ಟಿಂಗ್ ಚಟುವಟಿಕೆ ಮುಂದುವರಿಸುವಂತೆ ಮಧ್ಯಂತರ ಅನುಮತಿ ನೀಡಿ ಆದೇಶ ಹೊರಡಿಸಿದೆ.
2024-25ರ ಸಾಲಿನ ರೇಸಿಂಗ್ ಬೆಟ್ಟಿಂಗ್ ಚಟುವಟಿಕೆಗಳಿಗೆ ಅನುಮತಿ ನಿರಾಕರಿಸಲಾಗಿತ್ತು. ಬೆಟ್ಟಿಂಗ್ ಅವ್ಯವಹಾರಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿ ಆದೇಶಿಸಿತ್ತು. ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್, ಕರ್ನಾಟಕ ಟ್ರೈನ್ಸ್ ಅಸೋಸಿಯೇಷನ್ಸ್, ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘ, ಕರ್ನಾಟಕ ಜಾಕಿಗಳ ಸಂಘ ಸೇರಿದಂತೆ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ, 2024ರ ಮಾರ್ಚ್ ತಿಂಗಳಲ್ಲಿ ಸರ್ಕಾರ ಅನುಮತಿ ನೀಡಿದ್ದ ಷರತ್ತುಗಳ ಅನ್ವಯ ಕುದುರೆ ಪಂದ್ಯಗಳನ್ನು ಆಯೋಜನೆ ಮಾಡವುದಕ್ಕೆ ಅವಕಾಶ ನೀಡಿ ಆದೇಶಿಸಿದೆ.
ಆನ್‌ಕೋರ್ಸ್(ಬೆಂಗಳೂರಿನಲ್ಲಿ ನಡೆಯುವ ಪಂದ್ಯ) ಮತ್ತು ಆಫ್ ಕೋರ್ಸ್(ಹೊರಭಾಗಗಳಲ್ಲಿ ಮೈಸೂರು, ಬಾಂಬೆ ನಡೆಯುವ ಪಂದ್ಯಗಳು) ಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಅಲ್ಲದೆ, ರಾಜ್ಯ ಸರ್ಕಾರವು ಕುದುರೆ ಪಂದ್ಯಗಳ ಆಯೋಜನೆ ವೇಳೆ ಅದರ ಮೇಲ್ವಚಾರಣೆ ಮತ್ತು ನಿಯಂತ್ರಣವವನ್ನು ಮಾಡಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಈ ಆದೇಶದಿಂದಾಗಿ ಕಳೆದ ಮೂರು ತಿಂಗಳನಿಂದ ಸ್ಥಗಿತಗೊಂಡಿದ್ದ ಕುದುರೆ ಪಂದ್ಯಾವಳಿಗಳು ಪುನಾರಂಭವಾಗಲಿದೆ.
Post a comment
Log in to write reviews