ತಿರುಪತಿ ತಿರುಮಲ ದೇವಸ್ಥಾನದಿಂದ 350 ಮೆಟ್ರಿಕ್ ಟನ್ 'ನಂದಿನಿ ತುಪ್ಪ' ಪೂರೈಕೆಗೆ ಬೇಡಿಕೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ತಿರುಪತಿ ತಿರುಮಲ ದೇವಸ್ಥಾನದಿಂದ 350 ಮೆಟ್ರಿಕ್ ಟನ್ ತುಪ್ಪ ಪೂರೈಕೆಗೆ ಬೇಡಿಕೆ ಬಂದಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಿರುಪತಿಯತ್ತ ಹೊರಟ ತುಪ್ಪದ ಟ್ಯಾಂಕರ್ ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ "ನಂದಿನಿ ಬ್ರಾಂಡ್" ಮತ್ತೊಮ್ಮೆ ತಿರುಪತಿ ದೇವಾಲಯದ ಪ್ರಸಾದಕ್ಕೆ ತುಪ್ಪ ಪೂರೈಸುವ ಪುಣ್ಯಕಾರ್ಯಕ್ಕೆ ಅಣಿಯಾಗಿರುವುದಾಗಿ ತಿಳಿಸಿದ್ದಾರೆ.
ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್, ಎಂಡಿ ಜಗದೀಶ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಿರುಪತಿಯಲ್ಲಿ ತಯಾರಾಗುವ ಲಡ್ಡು ಪ್ರಸಾದ ಮೊದಲಿನಂತೆ ಇಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಅಲ್ಲಿ ಬಳಕೆ ಮಾಡಲಾಗುತ್ತಿದ್ದ ತುಪ್ಪದ ಗುಣಮಟ್ಟ ನಂದಿನಿ ತುಪ್ಪದಷ್ಟು ಇಲ್ಲ ಎಂಬ ಮಾತುಗಳೂ ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಮತ್ತೆ ಕೆಎಂಎಫ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಈ ಹಿಂದೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹಲವಾರು ವರ್ಷಗಳಿಂದ ಅಸ್ಮಾರ್ಕ್ ಸ್ಪೇಷಲ್ ಗ್ರೇಡ್ ಹೊಂದಿರುವ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ಪವಿತ್ರ ಶ್ರೀವಾರಿ ಪ್ರಸಾದ ತಯಾರಿಕೆಗೆ ಸುಮಾರು 5 ಸಾವಿರ ಟನ್ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿತ್ತು. ಕಳೆದ ವರ್ಷ ಟೆಂಡರ್ ಕೈತಪ್ಪಿದ್ದ ಹಿನ್ನಲೆ ತಿರುಪತಿಗೆ ಕೆಎಂಎಫ್ನಿಂದ ತುಪ್ಪ ಸರಬರಾಜು ನಿಂತಿತ್ತು. ಇದೀಗ ಮತ್ತೆ ತುಪ್ಪ ಸರಬರಾಜು ಮಾಡಲು ಕೆಎಂಎಫ್ ನಿರ್ಧರಿಸಿದೆ.
Poll (Public Option)

Post a comment
Log in to write reviews