
ಬೆಂಗಳೂರು: ಸಾರ್ವಜನಿಕರ ಮನವಿ ಮೇರೆಗೆ ಇನ್ನು ಮುಂದೆ ಬೆಂಗಳೂರಿನಲ್ಲಿರುವ ಎಲ್ಲಾ ಪಾರ್ಕ್‌ಗಳು ಬೆಳಿಗ್ಗೆ 5 ರಿಂದ ರಾತ್ರಿ 10ರವರೆಗೆ ತೆರೆಯಲಿವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಡಿಕೆ ಶಿವಕುಮಾರ್, ತೋಟಗಾರಿಕಾ ಇಲಾಖೆ ವ್ಯಾಪ್ತಿಗೆ ಬರುವ ಕಬ್ಬನ್‌ಪಾರ್ಕ್, ಲಾಲ್‌ಬಾಗ್ ಹೊರತುಪಡಿಸಿ ಉಳಿದೆಡೆ ಇರುವ ಪಾರ್ಕ್‌ಗಳನ್ನು ದಿನದ 17 ಗಂಟೆಗಳ ಕಾಲ ತೆರೆಯಲಿವೆ. ಪ್ರಸ್ತುತ ಬೆಳಗ್ಗೆ 5 ರಿಂದ 10 ಗಂಟೆ, ಮಧ್ಯಾಹ್ನ 1.30 ರಿಂದ ರಾತ್ರಿ 8 ಗಂಟೆವರೆಗೆ ಪಾರ್ಕ್‌ಗಳು ಓಪನ್ ಇರುತ್ತಿತ್ತು. ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಪಾರ್ಕ್‌ಗಳನ್ನು ಬಂದ್ ಮಾಡುವುದರಿಂದ ಸಾರ್ವಜನಿಕರು ಬಿಸಿಲಿನ ಝಳ ಅನುಭವಿಸುವಂತಾಗಿದೆ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಆಯಾಸವಾದರೆ ವಿಶ್ರಾಂತಿ ಪಡೆಯಲು, ಮಧ್ಯಾಹ್ನದ ವೇಳೆಯಾದ್ದರಿಂದ ಊಟದ ಬಾಕ್ಸ್ ಇದ್ದರೂ ಬೀದಿಯಲ್ಲಿ ತಿನ್ನುವ ಪರಿಸ್ಥಿತಿ ಇದೆ. ಹೀಗಾಗಿ ನೆರಳಿರುವ ಪ್ರದೇಶಗಳನ್ನು ಬಂದ್ ಮಾಡುವುದು ಬೇಡ ಎನ್ನುವ ಸಲಹೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನದ ಸಮಯದಲ್ಲೂ ತೆರೆಯಲು ತೀರ್ಮಾನಿಸಲಾಗಿದೆ.
ಅಕ್ರಮ ಚಟುವಟಿಕೆಗಳು ನಡೆಯಬಹುದು ಎಂಬ ಆತಂಕಕ್ಕೆ ಪರಿಹಾರ ಸೂಚಿಸಿದ ಡಿಸಿಎಂ, ಪಾರ್ಕ್‌ಗಳಿಗೆ ಸೂಕ್ತಗೇಟ್, ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಲಾಗುತ್ತದೆ. ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇಷ್ಟಾಗಿಯೂ ಉದ್ಯಾನಗಳಲ್ಲಿ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸಲು ಪೊಲೀಸರ ಗಸ್ತು, ಮಾರ್ಷಲ್‌ಗಳನ್ನು ನಿಯೋಜಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
Poll (Public Option)

Post a comment
Log in to write reviews