
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಸತತ 9 ದಿನಗಳಿಂದ ಸೆರೆವಾಸದಲ್ಲಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಸಹಚರರನ್ನು ವಿಚಾರಣೆ ನಡೆಸಲಾಗಿದೆ. ಇಂದು ದರ್ಶನ್ ಗ್ಯಾಂಗ್‌ನ ಕಸ್ಟಡಿ ಅವಧಿ ಮುಗಿಯುವ ಹಿನ್ನೆಲೆ ಪೊಲೀಸರು ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ, ಸ್ಥಳ ಮಹಜರು ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಮತ್ತೆ ತಮ್ಮ ಕಸ್ಟಡಿಗೆ ಕೇಳುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಇಂದೇ ದರ್ಶನ್ ಮತ್ತು ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ದರ್ಶನ್‌ಗೆ ಬೇಲ್ ಸಿಗೋದು ಡೌಟ್ : ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ದಾಖಲಾಗಿರುವ ಕೊಲೆ ಪ್ರಕರಣವಾದ್ದರಿಂದ ನ್ಯಾಯಾಲಯದಲ್ಲಿ ದರ್ಶನ್ ಮತ್ತು ಗ್ಯಾಂಗ್‌ಗೆ ಬೇಲ್ ಸಿಗೋದು ಅನುಮಾನ. ಆದರೆ ಕಾನೂನು ಪ್ರಕ್ರಿಯೆಯ ಪ್ರಕಾರ ದರ್ಶನ್ ಪರ ವಕೀಲರು ಕೆಳಹಂತದ ನ್ಯಾಯಾಲಯದಲ್ಲಿ ಬೇಲ್ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ನ್ಯಾಯಾಲಯ ಬೇಲ್ ನಿರಾಕರಿಸಿದ ನಂತರ ಹೈಕೋರ್ಟ್ ನಲ್ಲಿ ಬೇಲ್ ಅರ್ಜಿ ಸಲ್ಲಿಸಬಹುದಾಗಿದೆ.
ಸಾಧಾರಣವಾಗಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೆ ಹೈಕೋರ್ಟ್ ನಲ್ಲೂ ಬೇಗ ಬೇಲ್ ಸಿಗುವುದು ಕಷ್ಟವಾಗುತ್ತದೆ. ಸಾಕ್ಷಿಗಳನ್ನು ಬೆದರಿಸುವ, ಸಾಕ್ಷ್ಯ ನಾಶಪಡಿಸುವ ಸಂಭವವಿರುವುದರಿಂದ ಬೇಲ್ ನೀಡಬಾರದು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಾಲಯವನ್ನು ವಿನಂತಿಸಿಕೊಳ್ಳುತ್ತಾರೆ. ಆರೋಪಿಗಳು ಪ್ರಭಾವಿಗಳಾದ್ದರಿಂದ ಅವರು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚು ಎಂದು ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರು ವಾದಿಸುವುದು ನಿಶ್ಚಿತ. ಹೀಗಾಗಿ ಬೇಲ್ ಸಿಗುವುದು ಅಷ್ಟು ಸುಲಭವಲ್ಲ.
ರೇಣುಕಾಸ್ವಾಮಿ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ದರ್ಶನ್ ಮತ್ತು ತಂಡಕ್ಕೆ ಬೇಲ್ ಪಡೆಯುವ ಮಾರ್ಗಗಳು ತೆರೆದುಕೊಳ್ಳಲಿವೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕನಿಷ್ಠ ಮೂರರಿಂದ ಆರು ತಿಂಗಳ ಮಟ್ಟಿಗೆ ದರ್ಶನ್ ಜೈಲಿನಲ್ಲೇ ಇರುವುದು ಮಾತ್ರ ಬಹುತೇಕ ಖಚಿತ.
Poll (Public Option)

Post a comment
Log in to write reviews