
ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಗುರುವಾರ ಬಂಗಾಳಕೊಲ್ಲಿ ತೀರದ ಪ್ರದೇಶಗಳಿಗೆ ಡಾನಾ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪೂರ್ವ– ಮಧ್ಯ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಉತ್ತರಕ್ಕೆ ವಾಯುಭಾರ ಕುಸಿತ ಉಂಟಾಗಿದೆ. ಇದು ಪಶ್ಚಿಮ– ವಾಯುವ್ಯ ದಿಕ್ಕಿನೆಡೆಗೆ ಚಲಿಸಿ ಬುಧವಾರದ ವೇಳೆಗೆ ಅದು ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಅಕ್ಟೋಬರ್ 24 ರ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ತೀವ್ರಗೊಂಡು ಉತ್ತರ ಬಂಗಾಳ ಕೊಲ್ಲಿಯ ತೀರ ಪ್ರದೇಶವನ್ನು ಅಪ್ಪಳಿಸಲಿದೆ.
ವಾಯುವ್ಯ ದಿಕ್ಕಿಗೆ ಚಲಿಸಲಿರುವ ಈ ಚಂಡಮಾರುತ ಗುರುವಾರ ರಾತ್ರಿ ಅಥವಾ ಶುಕ್ರವಾರ ಮುಂಜಾನೆ ಒಡಿಶಾದ ಪುರಿಗೆ (Odisha Puri) ಅಪ್ಪಳಿಸಲಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 100 ರಿಂದ 120 ಕಿಲೋಮೀಟರ್‌ಗಳವರೆಗೆ ಇರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯೊಳಗೆ ದಡ ಸೇರುವಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗಲಿದೆ. ಅಕ್ಟೋಬರ್ 23 ರಿಂದಲೇ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಗಂಟೆಗೆ 90 ರಿಂದ 120 ಕಿಮಿ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಇದನ್ನು ತೀವ್ರ ಚಂಡಮಾರುತ ಎಂದು ವರ್ಗೀಕರಿಸಲಾಗಿದೆ.
ಪುರಿ, ಭುವನೇಶ್ವರ, ಜಗತ್‌ಸಿಂಗ್‌ಪುರ, ಕೇಂದ್ರಪಾರಾ, ಭದ್ರಕ್, ಬಾಲಸೋರ್, ಜಾಜ್‌ಪುರ್, ಧೆಂಕನಲ್, ಕೆಂದುಜಾರ್ ಮತ್ತು ಮಯೂರ್‌ಭಂಜ್ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಕೂಡ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಕ್ಷಣಾ ಮತ್ತು ಪರಿಹಾರ ಸಿದ್ಧತೆಗಳನ್ನು ಪರಿಶೀಲಿಸಲು ಸಭೆಯನ್ನು ಕರೆದಿದೆ.
ಸಂಭಾವ್ಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಒಟ್ಟು 14 NDRF ತಂಡಗಳನ್ನು ಪಶ್ಚಿಮ ಬಂಗಾಳದಲ್ಲಿ ಮತ್ತು 11 ಒಡಿಶಾದಲ್ಲಿ ನಿಯೋಜಿಸಲಾಗಿದೆ. ಕ್ಯಾಬಿನೆಟ್ ಕಾರ್ಯದರ್ಶಿ ಟಿವಿ ಸೋಮನಾಥನ್ ಅವರು ಆಸ್ತಿ, ಪಾಸ್ತಿ ನಷ್ಟವನ್ನು ಕಡಿಮೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎರಡೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.
Tags:
Poll (Public Option)

Post a comment
Log in to write reviews