
ರಾಮನಗರ: ಚನ್ನಪಟ್ಟಣ ಉಪಚುನಾವಣೆ ಕಣ ರಂಗೇರಿದ್ದು, ಮೈತ್ರಿ ಪಕ್ಷದಲ್ಲಿ ಟಿಕೆಟ್ ಕಗ್ಗಂಟು ಮುಂದುವರೆದಿದೆ. ಈಗಾಗಲೇ ಕ್ಷೇತ್ರದಲ್ಲಿ ದಳಪತಿಗಳು ಅಲರ್ಟ್ ಆಗಿದ್ದು, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗಿಳಿಸಲು ಜೆಡಿಎಸ್ ನಾಯಕರು ಸಿದ್ಧತೆ ಆರಂಭಿಸಿದ್ದಾರೆ. ಭಾನುವಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದ ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿ ಆಯ್ಕೆ ಬಗ್ಗೆ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದರು.
ಈ ವೇಳೆ ನಿಖಿಲ್ ಸ್ಪರ್ಧೆಗೆ ಸಾಕಷ್ಟು ಒತ್ತಡ ಕೇಳಿಬಂದಿದೆ. ಈಗ ಮಾಜಿ ಸಚಿವ ಸಿಪಿವೈಗೆ ಟಿಕೆಟ್ ಕೈ ತಪ್ಪುವ ಆತಂಕ ಹೆಚ್ಚಾಗಿದ್ದು, ಮೈತ್ರಿ ಟಿಕೆಟ್ ಗಿಟ್ಟಿಸಿಕೊಳ್ಳಲು ದೆಹಲಿ ದಂಡಯಾತ್ರೆ ಮಾಡಿದ್ದಾರೆ. ಇಂದು ದೆಹಲಿಗೆ ತೆರಳಿರುವ ಮಾಜಿ ಸಚಿವ ಸಿಪಿ ಯೋಗೆಶ್ವರ್ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಟಿಕೆಟ್ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ. ಮೈತ್ರಿ ಟಿಕೆಟ್ ಕೈತಪ್ಪಿದರೆ ಮುಂದಿನ ನಡೆಯ ಬಗ್ಗೆಯೂ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಡುವ ಸಾಧ್ಯತೆಯಿದೆ.
ಎರಡ್ಮೂರು ದಿನಗಳಲ್ಲಿ ಬೆಂಬಲಿಗರು, ಆಪ್ತರ ಬೃಹತ್ ಸಮಾವೇಶ ನಡೆಸಲು ಸಿಪಿವೈ ತಯಾರಿ ನಡೆಸುತ್ತಿದ್ದು ಎಲ್ಲದಕ್ಕೂ ರೆಡಿ ಇರಿ ಎಂದು ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಈ ಟಿಕೆಟ್ ಕಗ್ಗಂಟನ್ನು ಹೈಕಮಾಂಡ್ ನಾಯಕರು ಹೇಗೆ ಬಿಡಿಸುತ್ತಾರೆ ಎನ್ನುವುದೇ ಸದ್ಯದ ಕುತೂಹಲ.
Poll (Public Option)

Post a comment
Log in to write reviews