
ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂ. ಹಣ ಸುಲಿಗೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಹಲವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಸೀತಾರಾಮನ್ ಮತ್ತು ಇತರರು ಚುನಾವಣಾ ಬಾಂಡ್ಗಳ ಸೋಗಿನಲ್ಲಿ ಸುಲಿಗೆ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಸಂಘಟನೆಯ ಆದರ್ಶ ಅಯ್ಯರ್ ಅವರು ದೂರು ದಾಖಲಿಸಿದ್ದರು. ಬೆಂಗಳೂರಿನಲ್ಲಿ ದಾಖಲಾಗಿರುವ ದೂರಿನಲ್ಲಿ ನಿರ್ಮಲಾ ಸೀತಾರಾಮನ್ ಮಾತ್ರವಲ್ಲದೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕರ್ನಾಟಕ ಬಿಜೆಪಿ ನಾಯಕರಾದ ನಳಿನ್ ಕುಮಾರ್ ಕಟೀಲ್ ಮತ್ತು ಬಿ.ವೈ.ವಿಜಯೇಂದ್ರ ಅವರ ಹೆಸರೂ ಇದೆ. ಒತ್ತಡದ ತಂತ್ರವಾಗಿ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಗಳನ್ನು ಉಲ್ಲೇಖಿಸಿ ಕಾರ್ಪೊರೇಟ್ ಸಂಸ್ಥೆಗಳು ಸಾವಿರಾರು ಕೋಟಿಗಳ ಚುನಾವಣಾ ಬಾಂಡ್ಗಳನ್ನು ಖರೀದಿಸಲು ಒತ್ತಾಯಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Poll (Public Option)

Post a comment
Log in to write reviews