ಮೈಸೂರು: ಅಂಬಾವಿಲಾಸ ಅರಮನೆಯಲ್ಲಿ ಶರನ್ನವರಾತ್ರಿಯ ಪೂಜಾ ಕೈಂಕರ‍್ಯಗಳು ಕೊನೆಗೊಂಡವು. ಯದುವೀರ್ ಒಡೆಯರ್ ಜಟ್ಟಿ ಕಾಳಗದ ನಂತರ ಅರಮನೆಯಿಂದ ವಿಜಯಯಾತ್ರೆ ಕೈಗೊಂಡು, ಬನ್ನಿ ಪೂಜೆ ಸಲ್ಲಿಸುವ ಮೂಲಕ ಅರಮನೆಯಲ್ಲಿ ೧೦ ದಿನಗಳ ಶರನ್ನವರಾತ್ರಿ ಸಂಭ್ರಮವು ಸಂಪನ್ನಗೊಂಡಿತು.
ನಾಡಹಬ್ಬ ದಸರಾದ ಅಂತಿಮ ದಿನವಾದ ವಿಜಯದಶಮಿಯಂದು ಅಕ್ಟೋಬರ್ ೧೨ರಂದು ಅರಮನೆಯಲ್ಲಿ ಸಾಂಪ್ರದಾಯಿಕ ದಸರಾ ಸಂಪನ್ನಗೊಂಡಿತು. ಬೆಳಗ್ಗೆಯಿಂದಲೇ ವಿಜಯದಶಮಿ ಧಾರ್ಮಿಕ ಕಾರ್ಯಕ್ರಮಗಳು ಅರಮನೆಯಲ್ಲಿ ವಿಜೃಂಭಣೆಯಿಂದ ಜರುಗಿದವು.
ಜಟ್ಟಿ ಕಾಳಗ: ಅರಮನೆಯ ಸವಾರಿ ತೊಟ್ಟಿಯಲ್ಲಿ ಮೈಸೂರಿನ ಜಟ್ಟಿ ಬಲರಾಮ್ ಹಾಗೂ ಬೆಂಗಳೂರಿನ ಜಟ್ಟಿ ನಾರಾಯಣ ನಡುವೆ ಮತ್ತು ಚನ್ನಪಟ್ಟಣದ ರಾಘವೇಂದ್ರ ಜಟ್ಟಿ ಹಾಗೂ ಚಾಮರಾಜನಗರದ ಶ್ರೀನಿವಾಸ್ ನಡುವೆ ಜಟ್ಟಿ ಕಾಳಗ ನಡೆಯಿತು. ನಂತರ ಅರಮನೆಯಿಂದ ವಿಜಯಯಾತ್ರೆ ಹೊರಟ ಯದುವೀರ್ ಒಡೆಯರ್, ಭುವನೇಶ್ವರಿ ದೇವಾಲಯದ ಆವರಣದಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಅವರು ಅರಮನೆಯಲ್ಲಿ ಕಂಕಣ ವಿಸರ್ಜನೆ ಮಾಡಿದರು. ಇದರೊಂದಿಗೆ, ಅರಮನೆಯ ಶರನ್ನವರಾತ್ರಿಯ ವಿಜಯದಶಮಿ ಪೂಜೆ ಮುಕ್ತಾಯಗೊಂಡಿತು.
ಅರಮನೆಗೆ ಬಂದ ಉತ್ಸವ ಮೂರ್ತಿ: ಚಾಮುಂಡಿ ಬೆಟ್ಟದಿಂದ ಅಂಬಾರಿಯಲ್ಲಿ ವಿರಾಜಮಾನಳಾಗುವ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ತೆರೆದ ವಾಹನದಲ್ಲಿ ಅರಮನೆಗೆ ತರಲಾಯಿತು. ಅರಮನೆಯಲ್ಲಿ ಚಿನ್ನದ ಅಂಬಾರಿಯಲ್ಲಿ ಕೂರಿಸಲಾಗುತ್ತಿದ್ದು, ಸಂಜೆ 4 ಗಂಟೆಯಿಂದ 4.30ರ ಶುಭಲಗ್ನದಲ್ಲಿ ಪುಷ್ಟಾರ‍್ಚನೆ ನಡೆಯಲಿದೆ. ಗಜಪಡೆ ನಾಯಕ ಅಭಿಮನ್ಯು ನೇತೃತ್ವದಲ್ಲಿ ಜಂಬೂ ಸವಾರಿ ನಡೆಯಲಿದೆ.
ದಸರಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಕುಟುಂಬದವರು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದಾರೆ. ಮತ್ತೊಂದೆಡೆ, ಗಜಪಡೆ ಹಾಗೂ ಸ್ತಬ್ಧಚಿತ್ರಗಳು ಜಂಬೂ ಸವಾರಿಗೆ ಸಿದ್ಧರಾಗಿದ್ದಾರೆ.
ಜಂಬೂ ಸವಾರಿ ನೇರ ವೀಕ್ಷಣೆಯನ್ನು ಸಾಮ್ರಾಟ್ ಟಿವಿಯಲ್ಲಿ ವೀಕ್ಷಿಸಲು ಈ ಕೆಳಗಿನ ಲಿಂಗ್ ಕ್ಲಿಕ್ ಮಾಡಿ:
Post a comment
Log in to write reviews