2014ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂಬ ವಿವಾದಾತ್ಮಕ ಹೇಳಿಕೆ; ಕಂಗನಾಗೆ ಕೋರ್ಟ್ ನೋಟಿಸ್
ಹೈದರಾಬಾದ್: ಭಾರತಕ್ಕೆ ನಿಜವಾದ ಸ್ವಾತಂತ್ರ್ಯ 2014ರಲ್ಲಿ ಸಿಕ್ಕಿತ್ತು ಎಂಬ ಕಂಗನಾ ರಣಾವತ್ ಹೇಳಿಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಆಧರಿಸಿ ನಟಿಗೆ ಮಧ್ಯ ಪ್ರದೇಶದ ಜಬಲ್ಪುರ್ ವಿಶೇಷ ಸಂಸದ-ಶಾಸಕರ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆಯೂ ಆಗಿರುವ ನಟಿ ಕಂಗನಾ ರಣಾವತ್ ಅವರ ಹೇಳಿಕೆ ಪ್ರಶ್ನಿಸಿ ವಕೀಲ ಅಮಿತ್ ಕುಮಾರ್ ಸಾಹು ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಶ್ವೇಶ್ವರಿ ಮಿಶ್ರಾ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ನಟಿ ಹೇಳಿಕೆ ಸಂಬಂಧ ವಕೀಲರು ಈ ಹಿಂದೆ ಅಧರ್ತಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಈ ದೂರಿನ ಸಂಬಂಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆ 2021ರಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು ಎಂದು ವಕೀಲ ಅಮಿತ್ ಕುಮಾರ್ ಸಾಹು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ ನಂತರ ಹೈಕೋರ್ಟ್ ಮೊರೆ ಹೋಗಿದ್ದಾರೆ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 5 ರಂದು ನಡೆಯಲಿದೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೆ ಕಂಗನಾ ಅವರು 1947ರಲ್ಲಿ ಸಿಕ್ಕ ಸ್ವಾತಂತ್ರ್ಯವನ್ನು ಭಿಕ್ಷೆ ಎಂದು ಕರೆದಿದ್ದು, 2014ರ ನಂತರ ಭಾರತಕ್ಕೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
Post a comment
Log in to write reviews